ಚಿತ್ರದುರ್ಗ:ಪೋಕ್ಸೋ ಪ್ರಕರಣ ಸಂಬಂಧ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಎದುರು ಹಾಜರು ಪಡಿಸಲಾಯಿತು.
ಈಗಾಗಲೇ ಶ್ರೀಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಒಪ್ಪಿಸಿತ್ತು. ನಂತರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಐಸಿಯು ಘಟಕದಲ್ಲಿ ದಾಖಲಿಸಲಾಗಿತ್ತು. ಬಳಿಕ ಮುರುಘಾ ಶರಣರನ್ನು ಆಸ್ಪತ್ರೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಕರೆತಂದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ:ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಐಸಿಯು ವಾರ್ಡ್‌ಗೆ ದಾಖಲು
ಈ ವೇಳೆ ಶ್ರೀಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ
ಶ್ರೀಗಳ ಆರೋಗ್ಯದ ಬಗ್ಗೆ ಬೆಳಗ್ಗೆ ವಕೀಲ ಉಮೇಶ್ ಪ್ರತಿಕ್ರಿಯಿಸಿ, ಶ್ರೀಗಳ ಆರೋಗ್ಯ ಗಂಭೀರವಾಗಿದೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಹೃದಯ ಸಂಬಂಧಿ ಕಾಯಿಲೆ ಕೂಡಾ ಇರುವುದು ಗೊತ್ತಾಗಿದೆ. ಹೀಗಾಗಿ ಹಿರಿಯ ವೈದ್ಯರ ತಂಡ ದಾವಣಗೆರೆಯಿಂದ ಆಗಮಿಸುತ್ತಿದ್ದಾರೆ. ಅವರು ಬಂದು ಪರೀಕ್ಷೆ ನಡೆಸಿ ಸಲಹೆ ನೀಡಿದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.
ವಾರ್ಡನ್ ರಶ್ಮಿ ಬಂಧನ:ಇದೇ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಶ್ಮಿಯನ್ನು ನಿನ್ನೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇಂದು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಪೋಕ್ಸೋ ಪ್ರಕರಣ: 2ನೇ ಆರೋಪಿ ವಾರ್ಡನ್ ರಶ್ಮಿ ಬಂಧನ
ಮುರುಘಾ ಶರಣರೂ ಸೇರಿದಂತೆ ವಸತಿ ನಿಲಯದ ವಾರ್ಡನ್ ರಶ್ಮಿ ಸೇರಿ ಮತ್ತೆ ಮೂವರ ವಿರುದ್ಧ ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸರ್ಕಾರದ ಹಸ್ತಕ್ಷೇಪ ಇಲ್ಲ-ಗೃಹ ಸಚಿವ:ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ತನಿಖೆಯನ್ನು ಪೊಲೀಸರು ಬಂಧಿಸಿರುವ ಕಾನೂನು ಪ್ರಕಾರ ನಡೆಸುತ್ತಾರೆ. ಇದರಲ್ಲಿ ಯಾವುದೇ ರೀತಿಯ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ತನಿಖೆ ನಡೆಸಲು ಪೊಲೀಸರು ಸ್ವತಂತ್ರರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ:ಮುರುಘಾ ಶ್ರೀಗಳ ಬಂಧನ: ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ, ಅವರ ಕೆಲಸ ಅವ್ರು ಮಾಡ್ತಿದ್ದಾರೆ: ಸಿಎಂ