ಚಿತ್ರದುರ್ಗ: ಕಳೆದ ಮೂರು ದಿನಗಳ ಹಿಂದೆ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಡವೆಗಳು ಪ್ರತ್ಯಕ್ಷವಾಗಿದೆ. ಹೌದು, ಈ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ 4 ಕಡವೆಗಳ ಚಲನವಲನ ಸೆರೆಯಾಗಿದೆ.
ಜೋಗಿಮಟ್ಟಿ ವನ್ಯಧಾಮದಲ್ಲಿ ಕರಡಿ, ಚಿರತೆ, ಜಿಂಕೆ ಸೇರಿದಂತೆ ಅದೆಷ್ಟೋ ಪ್ರಾಣಿ ಸಂಕುಲ ವಾಸವಿದೆ. ಆಗಾಗ ಗ್ರಾಮಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ಗ್ರಾಮಸ್ಥರಲ್ಲಿ ಭಯಭೀತಿ ಹುಟ್ಟಿಸುತ್ತವೆ. ಬಳಿಕ ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟು ಅವುಗಳನ್ನ ಕಾಡಿಗೆ ಅಟ್ಟುತ್ತಾರೆ. ಇದೀಗ ಬಯಲುಸೀಮೆಯ ಕಾನನದಲ್ಲಿ ಇದ್ದಕ್ಕಿದ್ದಂತೆ ಕಡವೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಅರಣ್ಯ ಅಧಿಕಾರಿಗಳಿಗೆ ಆಶ್ಚರ್ಯದ ಜೊತೆಗೆ ಸಂತೋಷವನ್ನುಂಟು ಮಾಡಿದೆ.
ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಂತು ಕಡವೆ ಹಿಂಡು ಕಳೆದ ಮೂರು ದಿನಗಳ ಹಿಂದಷ್ಟೇ ಅರಣ್ಯಾಧಿಕಾರಿಗಳು ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಗಸ್ತು ತಿರುಗುವ ವೇಳೆ ದಿಢೀರನೆ ಕಡವೆ ಪ್ರಾಣಿಯೊಂದು ಕಾಣಿಸಿಕೊಂಡಿದೆ. ಕಡವೆಯಾ ಅಥವಾ ಜಿಂಕೆಯೋ ಎಂಬ ಗೊಂದಲದಲ್ಲಿದ್ದ ಅಧಿಕಾರಿಗಳು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದು, ದೃಶ್ಯಾವಳಿಗಳಲ್ಲಿ ಕಡವೆಗಳು ಪ್ರತ್ಯಕ್ಷವಾಗಿದೆ ಎಂಬುದು ಖಚಿತವಾಗಿದೆ. ಆಹಾರ ಅರಸಿಕೊಂಡು ಕಡವೆಗಳು ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಮಂಗಳೂರಿನಲ್ಲೊಂದು ಅಪರೂಪದ ತಾರಸಿ ತೋಟ: ಕಡಲನಗರಿಯಲ್ಲಿ ಕಾಬೂಲ್ ದ್ರಾಕ್ಷಿ ಬೆಳೆ
ಕಳೆದ 40 ವರ್ಷಗಳ ಹಿಂದೆ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಡವೆಗಳ ಹಿಂಡು ವಾಸವಾಗಿತ್ತಂತೆ. ಬಳಿಕ ಜಿಲ್ಲೆಯಲ್ಲಿ ಆವರಿಸಿದ ಬರಗಾಲದಿಂದ ಆಹಾರ ಅರಸಿಕೊಂಡು ಕಡವೆಗಳು ಪಲಾಯನ ಮಾಡಿದ್ದವು ಎನ್ನಲಾಗಿದೆ.