ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿದೆ ಶಬರಿಮಲೆ ಮಾದರಿ ದೇಗುಲ: ಇರುಮುಡಿ ಹೊತ್ತು ಬರುತ್ತಿದ್ದಾರೆ ಮಾಲಾಧಾರಿಗಳು - Shabarimalai Model Temple

ಅಯ್ಯಪ್ಪನ ಭಕ್ತರಿಗೆ ವಿಶೇಷ ಪೂಜೆ ಸಲ್ಲಿಸಲು ಹಾಗೂ ವೃತಾಚರಣೆ ಸಮಾಪ್ತಿ ಮಾಡಲು ಕೋಟೆನಾಡಿನಲ್ಲಿ ಮಿನಿ ಶಬರಿಗಿರಿ ನಿರ್ಮಾಣವಾಗಿದೆ.

chitradurga
ಚಿತ್ರದುರ್ಗದ ಮದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ

By

Published : Dec 20, 2020, 8:07 PM IST

ಚಿತ್ರದುರ್ಗ: ಪ್ರತಿ ವರ್ಷ 48 ದಿನಗಳ ಕಾಲ ಕಠಿಣ ವ್ರತಾಚರಣೆ ಮಾಡಿ, ರಾಜ್ಯದ ಲಕ್ಷಾಂತರ ಭಕ್ತರು ಕೇರಳದ ಶಬರಿಗಿರಿಗೆ ತೆರಳಿ ಅಯ್ಯಪ್ಪನ ದರ್ಶನ ಮಾಡುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕಿನ ಭೀತಿ ಎಲ್ಲದಕ್ಕೂ ತಡೆಯೊಡ್ಡಿದೆ. ಹೀಗಾಗಿ ಶಬರಿಗಿರಿಗೆ ಹೋಗಲಾಗದ ನೂರಾರು ಮಂದಿ ಅಯ್ಯಪ್ಪ ಮಾಲಾಧಾರಿಗಳು ಚಿತ್ರದುರ್ಗದ ದೇಗುಲಕ್ಕೆ ನಿತ್ಯವೂ ಇರುಮುಡಿ ಹೊತ್ತು ಬರುತ್ತಿದ್ದಾರೆ.

ಚಿತ್ರದುರ್ಗದಲ್ಲಿದೆ ಶಬರಿಮಲೆ ಮಾದರಿ ದೇಗುಲ..

ಕೊರೊನಾ ಭೀತಿ ಅಯ್ಯಪ್ಪ ಮಾಲಾಧಾರಿಗಳಿಗೆ ಯಾತ್ರೆಗೆ ಅಡ್ಡಗಾಲಾಗಿದೆ. ಕಠಿಣ ವ್ರತಾಚರಣೆ ಮಾಡಿದರೂ, ಮಕರ ಸಂಕ್ರಮಣಕ್ಕೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲಾಗುತ್ತಿಲ್ಲ. ಕೇರಳ ಸರ್ಕಾರದ ಹತ್ತು ಹಲವು ನಿರ್ಬಂಧಗಳ ನಡುವೆ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳು ಪರದಾಡುವಂತಾಗಿದೆ.

ಅಯ್ಯಪ್ಪನ ಭಕ್ತರಿಗೆ ವಿಶೇಷ ಪೂಜೆ ಸಲ್ಲಿಸಲು ಹಾಗೂ ವೃತಾಚರಣೆ ಸಮಾಪ್ತಿ ಮಾಡಲು ಕೋಟೆನಾಡಿನಲ್ಲಿ ಮಿನಿ ಶಬರಿಗಿ ನಿರ್ಮಾಣವಾಗಿದೆ. ಚಿತ್ರದುರ್ಗದ ಮದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸದ್ಯ ಶಬರಿಮಲೆ ಮೆರುಗು ಬಂದಿದೆ. ಪ್ರತಿ ವರ್ಷ ಕೇರಳದ ಶಬರಿಗಿರಿಗೆ ತೆರಳುತ್ತಿದ್ದ ನೂರಾರು ಅಯ್ಯಪ್ಪ ಮಾಲಾಧಾರಿಗಳು ದುರ್ಗಕ್ಕೆ ಧಾವಿಸುತ್ತಿದ್ದಾರೆ. ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದ ಮಾದರಿಯಲ್ಲಿರುವ ಈ ದೇವಾಲಯಕ್ಕೆ ಮಾಲಾಧಾರಿಗಳು ಬಂದು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಯಾತ್ರೆಗೆ ಬರುತ್ತಿರುವ ಮಾಲಾಧಾರಿಗಳು

ಶಬರಿಗಿರಿಗೆ ತೆರಳಲಾಗದ ಮಾಲಾಧಾರಿಗಳು ಕಳೆದ 10 ದಿನಗಳಿಂದ‌ ಚಿತ್ರದುರ್ಗ ನಗರದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಮಂಗಳೂರು, ತುಮಕೂರು ಹಾಸನ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಅಯ್ಯಪ್ಪನ ಮಾಲಾಧಾರಿಗಳು ಈ ದೇವಾಲಯಕ್ಕೆ ಬಂದು ಹರಕೆ ತೀರಿಸುತ್ತಿದ್ದಾರೆ.

ಶಬರಿಗಿರಿಯ ಮಾದರಿಯಲ್ಲಿ ಪೂಜಾ ಕೈಂಕರ್ಯಗಳು

ಕಳೆದ ಒಂದೂವರೆ ದಶಕಗಳ ಹಿಂದೆಯೇ ಶಬರಿಗಿರಿಯ ಮಾದರಿಯಲ್ಲಿ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಹಾಗೂ ಶಬರಿಮಲೆ ಸೇವಾ ಸಮಾಜದಿಂದ ಮಿನಿ ಶಬರಿಗಿರಿ ದೇವಾಲಯ ನಿರ್ಮಾಣ ಮಾಡಿದೆ. ವಿಶೇಷವಾಗಿ ಶಬರಿಗಿರಿಯ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಅಡಿಪಾಯ ಹಾಕಿದ್ದು, ಶಬರಿಮಲೆ ನೀಲಕಂಠೇಶ್ವರಿ ದೇವಾಲಯ ಹೊರತುಪಡಿಸಿದ್ರೆ ಎಲ್ಲ ದೇವಾಲಯದ ದರ್ಶನ ಕೋಟೆನಾಡಿನಲ್ಲಿ ಭಕ್ತರಿಗೆ ದೂರೆಯುತ್ತಿದೆ. ಹೀಗಾಗಿ ಪ್ರತಿದಿನ ನೂರಾರು‌ ಮಾಲಾಧಾರಿಗಳು ಇರುಮುಡಿ ಹೊತ್ತು, 18 ಮೆಟ್ಟಿಲುಗಳು ಹತ್ತಿ, ಉಷಾ ಪೂಜೆ, ಅಭಿಷೇಕ, ತುಪ್ಪದ ಅಭಿಷೇಕ, ದೀಪಾರಾಧನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.

ಸಂಕ್ರಮಣಕ್ಕೆ ವಿಶೇಷ ಪೂಜೆ

ಶಬರಿಮಲೆಗೆ ತೆರಳಲಾಗದ ಅಯ್ಯಪ್ಪ ಮಾಲಾಧಾರಿಗಳು ಚಿತ್ರದುರ್ಗದ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಹೀಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ‌ ಜ. 14 ರ ಮಕರ‌‌ ಸಂಕ್ರಮಣ ದಿನದ‌ ಮಕರಜ್ಯೋತಿ ಹೊರತುಪಡಿಸಿ ಎಲ್ಲ, ಪೂಜಾ ಸೌಲಭ್ಯ ಒದಗಿಸಿದೆ. ಬರುವ ಮಾಲಾಧಾರಿಗಳಿಗೆ ಗಣಹೋಮ, ಬ್ರಹ್ಮೋತ್ಸವ, ತುಪ್ಪದ ಅಭಿಷೇಕ, ಕಳಸ ಪೂಜೆ ಹಾಗೂ ಆಭರಣ ಮೆರವಣಿಗೆ, ಇರುಮುಡಿ ಪೂಜೆ ಸೇರಿದಂತೆ ಶಬರಿಮಲೆ ಯಾತ್ರೆಯ ಮಾದರಿಯಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಿದ್ದಾರೆ.

ನಿತ್ಯ ಇರುಮುಡಿ ಹೊತ್ತು ಬರುತ್ತಿರುವ ಭಕ್ತರಿಗೆ ವೃತ್ತಾಚರಣೆ ವ್ಯವಸ್ಥೆ, ಭೋಜನ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ.‌ ಈಗಾಗಲೇ 300 ಜನ ಅಯ್ಯಪ್ಪ ಮಾಲಾಧಾರಿಗಳು ಈ ದೇವಾಲಯಕ್ಕೆ ಬಂದು ವೃತ್ತ ಪೂರ್ಣಗೊಳಿಸಿದ್ದಾರೆ ಎನ್ನುತ್ತಾರೆ ಆಡಳಿತ ಮಂಡಳಿಯ ಮುಖ್ಯಸ್ಥ ಶರಣ ಕುಮಾರ್​.

ದಿನದ 24 ಗಂಟೆಗಳ ಕಾಲ ಅಯ್ಯಪ್ಪ ಮಾಲಾಧಾರಿಗಳು ಆಗಮಿಸುತ್ತಿದ್ದು, ಪಡಿ ಪೂಜೆ, ಅನ್ನಸಂತರ್ಪಣೆ ಮಾಡಲಾಗುತ್ತಿದೆ. ಡಿ.15ರಿಂದ 21ರವರೆಗೆ ಅಯ್ಯಪ್ಪ ಮಾಲಾಧಾರಿಗಳಿಂದ ವಿಶೇಷ ಬ್ರಹ್ಮೋತ್ಸವ ಹಾಗೂ ಮಕರ ಸಂಕ್ರಮಣ ದಿನದಂದು ವಿಶೇಷ ದರ್ಶನದ ಅವಕಾಶ ಕಲ್ಪಿಸಲಾಗಿದೆ‌.

ABOUT THE AUTHOR

...view details