ಅಗಸ, ಕ್ಷೌರಿಕ ವೃತ್ತಿಯವರಿಗೆ 5 ಸಾವಿರ ರೂ. ನೆರವು: ಎಡಿಸಿ ಸಂಗಪ್ಪ - ಚಿತ್ರದುರ್ಗ ಜಿಲ್ಲಾ ಸುದ್ದಿ
ಲಾಕ್‍ಡೌನ್ ಪರಿಣಾಮವಾಗಿ ಉದ್ಯೋಗ ಇಲ್ಲದೆ, ಆದಾಯ ಕಳೆದುಕೊಂಡಿದ್ದ ಅಗಸ ಮತ್ತು ಕ್ಷೌರಿಕರಿಗೆ ಸರ್ಕಾರ ಆಸರೆಯಾಗಿದ್ದು, 5 ಸಾವಿರ ರೂ. ನೆರವು ನೀಡಲು ಸರ್ಕಾರ ಮುಂದಾಗಿದೆ.
ಚಿತ್ರದುರ್ಗ: ಅಗಸ ಮತ್ತು ಕ್ಷೌರಿಕ ವೃತ್ತಿಯವರಿಗೆ 5 ಸಾವಿರ ರೂ. ಒಂದು ಬಾರಿಯ ಪರಿಹಾರದ ನೆರವು ನೀಡಲು ಸರ್ಕಾರ ತೀರ್ಮಾನಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅಗಸ, ಕ್ಷೌರಿಕ ವೃತ್ತಿಯ ಅಸಂಘಟಿತ ವಲಯಗಳಿಗೆ ನೆರವು ನೀಡುವ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಾಕ್‍ಡೌನ್ ನಿಂದಾಗಿ ದೈನಂದಿನ ಉದ್ಯೋಗ ನಡೆಸಲಾಗದೆ ಆದಾಯ ಕಳೆದುಕೊಂಡ ಅಗಸ ಮತ್ತು ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ರೂ. 5000 ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ.
ಅದಕ್ಕಾಗಿ ಅರ್ಹ ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.