ಚಿತ್ರದುರ್ಗ: ನನ್ನವರು ನನ್ನ ಜೊತೆಗೆ ಇದ್ದುಕೊಂಡೇ ನನಗೆ ಮೊಸ ಮಾಡಿದ್ರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಹಿರಿಯೂರು ಅಂದ್ರೆ ಖುಷಿ ತರುತ್ತದೆ. ಹಿರಿಯೂರಿಗೆ ನನ್ನ ಪ್ರೀತಿ ಹಾಗೂ ಋಣ ಇದೆ. ಹಿಂದೆ 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಿರಿಯೂರು ಜನತೆಯೇ ಕಾರಣ ಎಂದು ತಿಳಿಸಿದರು.
ಉದ್ಯಮ ಮುಂದುವರಿಸಿದ್ದರೆ ಅಂಬಾನಿ ಅದಾನಿ ಆಗುತ್ತಿದ್ದೆ: ಆಗ ಹಿರಿಯೂರು ಮತ್ತು ಹೊಸದುರ್ಗ ಮತದಾರರ ಆಶೀರ್ವಾದದಿಂದ ಸರ್ಕಾರ ಬರಲು ಕಾರಣವಾಯಿತು. ತಾಯಿ ಸುಷ್ಮಾ ಸ್ವರಾಜ್ ಅವರಿಗೊಸ್ಕರ ನಾನು ರಾಜಕೀಯಕ್ಕೆ ಬಂದಿರುವೆ. ನಾನು ಅದೇ ಉದ್ಯಮವನ್ನು ಮುಂದುವರಿಸಿದ್ದರೇ ನಾನು ಇವತ್ತು ಅಂಬಾನಿ ಅದಾನಿ ಸಾಲಿನಲ್ಲಿ ಇರುತ್ತಿದ್ದೇನು ಎಂದು ಅಭಿಪ್ರಾಯ ತಿಳಿಸಿದರು.
ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು:4 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ನಿಟ್ಟಿನಲ್ಲಿ ನನ್ನನ್ನು ಬಂಧಿಸಿದ್ದರು. ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಲಿಲ್ಲ. ನಮ್ಮವರೇ ನನ್ನನ್ನು ಬಂಧನದಲ್ಲಿ ಇರುವಂತೆ ಮಾಡಿದರು. ರಾಜಕೀಯವಾಗಿ ನನ್ನನ್ನು ತುಳಿಯಲು ಆರಂಭಿಸಿದರು. ನನ್ನ ಜೊತೆಯಲ್ಲಿ ಇದ್ದವರು ನನಗೆ ಮೋಸ ಮಾಡಿದರು.
ಸ್ವಂತ ಊರಲ್ಲಿ ಇರಲು ಅವಕಾಶ ಕೊಡಲಿಲ್ಲ:4 ವರ್ಷಗಳ ಕಾಲ ಮನೆಯಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಎಲ್ಲವನ್ನೂ ನೋಡ್ತಾ ಇದ್ದೆ. ಸ್ವಂತ ಊರಿನಲ್ಲಿ ನಾನು ಇರಲು ಅವಕಾಶ ಮಾಡಿ ಕೊಡಲಿಲ್ಲ. ಪಕ್ಷ ಕಟ್ಟಿ ಜನರ ಮುಂದೆ ಹೋಗುತ್ತೇನೆ ಎಂದು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದೆ. ನನ್ನ ಮಗಳ ಹೆರಿಗೆ ಸಂದರ್ಭದಲ್ಲಿ ನನಗೆ ತುಂಬಾ ಕಷ್ಟ ಕೊಟ್ಟಿದ್ದರು. ಬಾಣಂತಿ ಹಾಗೂ ಹಸುಗೂಸು ಪೋಟೋ ತೆಗೆಯಬೇಕು ಎಂದು ಅಧಿಕೃತ ಕೇಳುತ್ತಾರೆ ಎಂಥ ನಾಚಿಕೆ ಆಗುತ್ತದೆ ಅಲ್ವಾ ಬಂಧುಗಳೇ ಎಂದು ಟೀಕಿಸಿದರು.