ಚಿತ್ರದುರ್ಗ:ಚಳ್ಳಕೆರೆ ಠಾಣೆಯ ಸಿಪಿಐ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿದ್ದ ಯುವತಿಯೇ ಇದೀಗ ಉಲ್ಟಾ ಹೊಡೆದಿದ್ದಾಳೆ. ಯುವತಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಲ್ಲದೇ ಒಂದಲ್ಲ, ಎರಡಲ್ಲ ಐದು ಬಾರಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಚಿತ್ರದುರ್ಗದ ಚಳ್ಳಕೆರೆ ಠಾಣೆಯ ಸಿಪಿಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಯುವತಿಯೇ ಸಿಪಿಐ ವಿರುದ್ಧ ಚಿತ್ರದುರ್ಗ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆದ್ರೆ, ಇದೀಗ ದೂರು ಕೊಟ್ಟ ಯುವತಿಯೇ ಉಲ್ಟಾ ಹೊಡೆದಿದ್ದಾಳೆ. "ಸಿಪಿಐ ಅವರಿಂದ ಲೈಂಗಿಕ ದೌರ್ಜನ್ಯ ಆಗಿಲ್ಲ. ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ" ಎಂದು ಯುವತಿ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾಳೆ. ಇದರೊಂದಿಗೆ ಈ ಪ್ರಕರಣ ಬೇರೆ ತಿರುವು ಪಡೆದುಕೊಂಡಂತಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಯುವತಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ಇಂದು(ಅ.24) ಬೆಳಗ್ಗೆ ಸಿಪಿಐ ಜಿ.ಬಿ.ಉಮೇಶ್ ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಿದ್ದರು. ಆದ್ರೆ, ಇದೀಗ ಯುವತಿ, ಸಿಪಿಐನಿಂದ ಯಾವುದೇ ಅತ್ಯಾಚಾರವಾಗಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ಮರು ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
ಯುವತಿ ನೀಡಿದ ದೂರಿನ ಸಾರಾಂಶ: ಸೋದರ ಮಾವನ ಮಗ ಜಿ.ಬಿ. ಉಮೇಶ್ ವಿರುದ್ಧ ದೂರು ನೀಡಿದ್ದ ಯುವತಿ, 5 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಉಮೇಶ್ ನಿರಂತರವಾಗಿ ಅತ್ಯಾಚಾರ, ಬಲಾತ್ಕಾರ ಮಾಡಿದ್ದಾರೆ. ಪರಿಣಾಮವಾಗಿ ಐದು ಬಾರಿ ಗರ್ಭಪಾತ ಮಾಡಲಾಗಿದೆ ಎಂದು ಆರೋಪಿಸಿದ್ದರು. ಐದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಯುವತಿಯ ಕುಟುಂಬಸ್ಥರು ಉಮೇಶ್ ಬಳಿ ಸಹಾಯ ಕೇಳಿದ್ದರು.
ಅದರಂತೆ ಚಿತ್ರದುರ್ಗದಿಂದ ದಾವಣಗೆರೆಗೆ ಯುವತಿಯನ್ನು ಕರೆಸಿಕೊಂಡ ಸೋದರ ಮಾವನ ಮಗನೂ ಆಗಿರುವ ಇನ್ಸ್‌ಪೆಕ್ಟರ್ ಉಮೇಶ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದನು. ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಾಗ ಅತ್ಯಾಚಾರ ಎಸಗಿರುವ ಆರೋಪ ಮಾಡಲಾಗಿತ್ತು.
ಉಮೇಶನ ಈ ದುಷ್ಕೃತ್ಯದಿಂದ ಯುವತಿ ಐದು ಸಲ ಗರ್ಭಾವತಿಯಾಗಿದ್ದು, ಐದು ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಈಗಾಗಲೇ ಉಮೇಶನಿಗೆ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿ ಹಾಗೇ ಇರು ಎಂದು ಯುವತಿಯನ್ನು ಒತ್ತಾಯಿಸುತ್ತಿದ್ದನು. ಅಲ್ಲದೆ ದಾವಣಗೆರೆಯ ನಿವೇಶನ ನಿಮಗೆ ಸಿಗದಂತೆ ಮಾಡುತ್ತೇನೆ, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಅದರ ಅನ್ವಯ ಪೊಲೀಸರು ಕಲಂ 376 ಕ್ಲಾಸ್ (2)(k)(n), 323, 504, 506 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ಆರೋಗ್ಯ ಕೇಂದ್ರದಲ್ಲಿ ನರ್ಸ್ ಕೈಕಾಲು ಕಟ್ಟಿಹಾಕಿ ದುರುಳರಿಂದ ಸಾಮೂಹಿಕ ಅತ್ಯಾಚಾರ!