ಚಿತ್ರದುರ್ಗ:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟದಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ.
ತಮ್ಮ ಸಮುದಾಯವನ್ನು ಏಕೆ ಕಾಯ್ದೆಯಿಂದ ಹೊರಗಿಡಲಾಗಿದೆ ಎಂದು ಮುಸ್ಲಿಮರು ಪ್ರಶ್ನಿಸಿ ಬೀದಿಗಿಳಿದಿದ್ದಾರೆ. ಆದರೆ, ಆರೋಗ್ಯ ಸಚಿವ ಶ್ರೀರಾಮುಲು ಮಾತ್ರ ತಾವು ನೀಡಿದ ಹೇಳಿಕೆಯಲ್ಲಿ ಮುಸ್ಲಿಮರನ್ನೂ ಕಾಯ್ದೆಯೊಳಗೆ ಸೇರಿಸಿ ತಮ್ಮ ತಪ್ಪು ಗ್ರಹಿಕೆಯನ್ನು ಸಾಬೀತುಪಡಿಸಿದರು.
ಮುಸ್ಲಿಮರನ್ನೂ ಪೌರತ್ವ ಕಾಯ್ದೆಯಲ್ಲಿ ಸೇರಿಸಿದ ರಾಮುಲು ! ಚಿತ್ರದುರ್ಗದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮುಲು ಅವರು, ಪೌರತ್ವ ಕಾಯ್ದೆ ತಂದಿರೋದು ಬೇರೆ ದೇಶಗಳಿಂದ ಬಂದು ನೆಲೆಸಿರುವ ಹಿಂದು, ಮುಸಲ್ಮಾನ ಹಾಗೂ ಇನ್ನಿತರೆ ಧರ್ಮದವರಿಗೆ ಪೌರತ್ವ ಕೊಡುವುದಕ್ಕಾಗಿ ಎಂದಿದ್ದಾರೆ.
ಎರಡೆರಡು ಬಾರಿ ಅದೇ ತಪ್ಪನ್ನು ಹೇಳಿರುವ ರಾಮುಲು, ಕಾಂಗ್ರೆಸ್ ನವರು ಸರಿಯಾಗಿ ಓದಿಕೊಳ್ಳಬೇಕು, ಮೋದಿ ಯಾರನ್ನೂ ದೇಶ ಬಿಟ್ಟು ಕಳಿಸಲು ಮುಂದಾಗಿಲ್ಲ, ಪೌರತ್ವ ಕಾಯ್ದೆ ಇರೋದು ಬೇರೆ ದೇಶಗಳಿಂದ ನಮ್ಮಲ್ಲಿ ಬಂದು ನೆಲೆಸಿ ರುವ ಹಿಂದು ಮುಸ್ಲಿಂ ಹಾಗು ಇನ್ನಿತರೆ ಧರ್ಮದವರಿಗೆ ಪೌರತ್ವ ಕೊಡುವ ಸಲುವಾಗಿ ಎಂದು ತಮ್ಮ ತಪ್ಪು ಗ್ರಹಿಕೆಯನ್ನು ಮತ್ತೆ ಸಾಬೀತುಪಡಿಸಿದರು.
ಸಂಕ್ರಾಂತಿ ಬದಲು ಸಂಕ್ರಾಮಣಿಕ ಹಬ್ಬ
ಕನ್ನಡ ಉಚ್ಚಾರಣೆಯಲ್ಲಿ ಮುಜುಗರ ಎದುರಿಸಿರುವ ರಾಮುಲು ಅವರು ಕೋಟೆ ನಾಡಿನಲ್ಲಿ ಮತ್ತೆ ಅದೇ ತಪ್ಪು ಮಾಡಿದ್ದಾರೆ. ಸಂಕ್ರಾಂತಿ ಎನ್ನುವ ಬದಲು ಸಂಕ್ರಾಮಣಿಕ ಹಬ್ಬ ಎಂದು ಉಚ್ಚರಿಸಿದ್ದಾರೆ.