ಶಿರಸಿ/ಬೆಳಗಾವಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಮತ್ತು ಆರ್ದ್ರಾ ವಿರುದ್ಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಶಿರಸಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಕರವೇ ಸ್ವಾಭಿಮಾನ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸೇರಿದ ಜಾಗರಣಾ ವೇದಿಕೆ ಮತ್ತು ಕರವೇ ಕಾರ್ಯಕರ್ತರು, ಅಮೂಲ್ಯ-ಆರ್ದ್ರಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿ ಭಾರತದ ಮುಸಲ್ಮಾನರನ್ನು ಎತ್ತಿಕಟ್ಟುವ ಹಾಗೂ ದೇಶ ವಿಭಜನೆ ಮಾಡುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಘೋಷಣೆ ಕೂಗಿದ ಯುವತಿಯರು ಹಾಗೂ ಕಾರ್ಯಕ್ರಮ ಸಂಘಟಿಸಿದ ಎಲ್ಲರ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ( ಕೋಕಾ ) ಕಾನೂನಿನ ಅನ್ವಯ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯಾದ್ಯಂತ ವಿವಿಧ ಸಂಘಟೆಗಳಿಂದ ಪ್ರತಿಭಟನೆ ಯಾದಗಿರಿಯಲ್ಲೂ ಅಮೂಲ್ಯ ಲಿಯೋನ್ ಮತ್ತು ಆರ್ದ್ರಾ ವಿರುದ್ಧ ಶಿವಾಜಿ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಡಿಗ್ರಿ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದ ಶಿವಾಜಿ ಸೇನೆಯ ನೂರಾರು ಕಾರ್ಯಕರ್ತರು, ಜಿಲ್ಲಾಡಳಿತ ಭವನದ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಅಲ್ಲದೆ ದೇಶದ್ರೋಹ ಕೃತ್ಯದಲ್ಲಿ ತೊಡಗಿರುವವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿದರು.
ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವೀರ ಸಾರ್ವಕರ್ ಯೂಥ್ ಆಸೋಸಿಯೇಷನ್ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ದನ್ನು ಆಸೋಸಿಯೇಷನ್ ಕಾರ್ಯಕರ್ತರು ಖಂಡಿಸಿದರು. ಬಳಿಕ ಅಮೂಲ್ಯಳನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಜಮಾಯಿಸಿ ಅಮೂಲ್ಯ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನೆಹರು ವೃತ್ತದಲ್ಲಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ಅಮೂಲ್ಯಳನ್ನು ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಬೆಳಗಾವಿಯಲ್ಲಿ ಶ್ರೀರಾಮಸೇನೆ ಹಿಂದುಸ್ತಾನ್ ಸಂಘಟನೆ ವತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸಿದ ಅಮೂಲ್ಯ ವಿರುದ್ಧದ ತನಿಖೆಯನ್ನು ಚುರುಕುಗೊಳಿಸಬೇಕು. ಈ ದೇಶದ ಅನ್ನ ತಿಂದು ಪಾಕ್ ಪರ ಜೈಕಾರ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹವರಿಗೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಸಿಎಎ ದೇಶದ ಪ್ರತಿ ಪ್ರಜೆಗೂ ಪೌರತ್ವ ನೀಡುವ ಕಾಯ್ದೆಯಾಗಿದೆ. ಇದರ ವಿರುದ್ಧ ವಿನಾ ಕಾರಣ ತಪ್ಪು ಮಾಹಿತಿ ರವಾನಿಸಿ ಜನಸಮುದಾಯಗಳ ನಡುವಿನ ಸೌಹಾರ್ದತೆ ಕದಡುವ ಸಂಚು ನಡೆಯುತ್ತಿದೆ. ಆದ್ದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.