ಚಿತ್ರದುರ್ಗ: ವಿದ್ಯಾರ್ಥಿಗಳ ಉತ್ತಮ ಜೀವನ ರೂಪಿಸಲು ಪ್ರಮುಖ ಪಾತ್ರ ವಹಿಸುವ ಶಿಕ್ಷಕರ ಬದುಕೇ ದುಸ್ತಾರವಾಗಿದೆ. ಕೊರೊನಾ ಲಾಕ್ಡೌನ್ ಪರಿಣಾಮದಿಂದಾಗಿ ಶಾಲೆಗಳಲ್ಲಿ ವೇತನ ಸಿಗದೆ ಖಾಸಗಿ ಶಾಲಾ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಖಾಸಗಿ ಶಿಕ್ಷಕರೊಬ್ಬರು ಇದೀಗ ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡಿ ಬದುಕಿನ ಬಂಡಿ ಸಾಗಿಸಲು ಮುಂದಾಗಿದ್ದಾರೆ.
ಲಾಕ್ಡೌನ್ ಪರಿಣಾಮ ಎಲ್ಲಾ ವಲಯಗಳಿಗೆ ಬಿಸಿ ತಟ್ಟಿದ ಪರಿಣಾಮ, ಹಣದ ವಹಿವಾಟು ಕುಸಿದಿದೆ. ಇತ್ತ ಶಾಲೆಯನ್ನು ತೆರೆಯಲು ಸರ್ಕಾರ ನಿರ್ಬಂಧ ಹೇರಿದ ಪರಿಣಾಮ ಅದೆಷ್ಟೋ ಶಿಕ್ಷಕರು ವೇತನವಿಲ್ಲದೆ ಜೀವನ ನಡೆಸಲಾಗದೆ ಹೈರಾಣಾಗಿದ್ದಾರೆ. ಕೊರೊನಾ ಹರಡದಂತೆ ಸರ್ಕಾರ ಶಾಲೆಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಬಳಿ ಆದಾಯ ಇಲ್ಲದ ಪರಿಣಾಮ, ಶಿಕ್ಷಕರಿಗೆ ವೇತನ ನೀಡದೆ ಇರುವುದು ಶಿಕ್ಷಕರ ಬದುಕು ದುಸ್ತರವಾಗಿದೆ.
ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿದ್ದ ಚಿತ್ರದುರ್ಗದ ಅವಿನಾಶ್, ವೇತನ ಇಲ್ಲದೆ ಜೀವನ ನಡೆಸಲಾಗದೆ ಇದೀಗ ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡ್ತಿದ್ದಾರೆ. ಆದ್ರೆ ಅದರಿಂದಲೂ ಸಹ ಜೀವನ ಸಾಗಿಸೋದು ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ, ಕುಲಕಸುಬು ಮಾಡುವಂತಹ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ನೀಡಿದ ಮಾದರಿಯಲ್ಲೇ ನಮಗೂ ಲಾಕ್ಡೌನ್ ಗೌರವ ಧನ ನೀಡಬೇಕೆಂಬ ಒತ್ತಾಯ ಖಾಸಗಿ ಶಾಲಾ ಶಿಕ್ಷಕರಿಂದ ಕೇಳಿಬಂದಿದೆ.
ಇನ್ನು ದೈಹಿಕ ಶಿಕ್ಷಕ ಅವಿನಾಶ್ರವರ ಸಮಸ್ಯೆಯನ್ನು ಆಲಿಸಿರುವ ಕೆಲ ವ್ಯಕ್ತಿಗಳು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣ ಖಾಸಗಿ ಶಾಲೆಯ ಶಿಕ್ಷಕರಿಗೆ ಅನುದಾನ ಬಿಡುಗಡೆ ಮಾಡಬೇಕೆಂಬ ಕೂಗಿಗೆ ಧ್ವನಿಗೂಡಿಸಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೆ ಹೋದಲ್ಲಿ ನಾವೇ ನಾಳೆಯ ದಿನ ಆರ್ಥಿಕ ಸಹಾಯಧನ ನೀಡ್ತಿವಿ ಎಂದು ಎಚ್ಚರಿಸಿದ್ದಾರೆ.
ಮೂರಾಬಟ್ಟೆಯಾಯಿತು ಖಾಸಗಿ ಶಾಲೆಯ ಶಿಕ್ಷಕರ ಬದುಕು ಒಟ್ಟಾರೆ ವಿವಿಧ ಕ್ಷೇತ್ರಗಳ ಸಾಧಕರನ್ನು ನಿರ್ಮಾಣ ಮಾಡುವ ಕಾರ್ಖಾನೆ ಎನಿಸಿರುವ ಶಾಲಾ ಶಿಕ್ಷಕರ ಬದುಕು ಲಾಕ್ಡೌನ್ ಎಫೆಕ್ಟ್ನಿಂದಾಗಿ ಬೀದಿಗೆ ಬಂದಿದೆ. ಹೀಗಾಗಿ ಕೂಡಲೇ ಈ ಶಿಕ್ಷಕರಿಗೆ ಸರ್ಕಾರ ಲಾಕ್ಡೌನ್ ಗೌರವಧನ ನೀಡುವುದರ ಜೊತೆಗೆ ಶಾಲಾ ಮಾಲೀಕರಿಂದ ಸಂಬಳ ನೀಡುವಂತೆ ಆದೇಶಿಸಬೇಕಿದೆ.