ಚಿತ್ರದುರ್ಗ/ದಾವಣಗೆರೆ:ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಕೋಟೆನಾಡು ಚಿತ್ರದುರ್ಗದ ಜನರು ಯುಗಾದಿ ಹಬ್ಬಕ್ಕೆ ಭರ್ಜರಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.
ಯುಗಾದಿ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿರುವ ಜನ ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದ್ದು, ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿ ಬಟ್ಟೆ ಸೇರಿದಂತೆ ಅನೇಕ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಜನಸಾಗರವೇ ಹರಿದು ಬಂದಿದೆ.
ಮಾರುಕಟ್ಟೆಗೆ ಬಂದ ಗ್ರಾಹಕರು ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಅಡ್ಡಾಡ್ತಿರೋ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸ್ ಇಲಾಖೆ ಮತ್ತು ನಗರಸಭೆ ಇಲಾಖೆ ಮೈಕ್ಗಳಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರೂ, ಮನವಿಗೆ ಡೋಂಟ್ ಕೇರ್ ಎಂಬಂತೆ ತಮಗಿಷ್ಟ ಬಂದಂತೆ ನಗರದಲ್ಲಿ ಜನರ ಓಡಾಟ ನಡೆಸುತ್ತಿದ್ದರು.
ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ಸಹ ಜನಸಂದಣಿ ಹೆಚ್ಚಾಗಿದ್ದು, ಮಾಸ್ಕ್, ಸಾಮಾಜಿಕ ಅಂತರವನ್ನು ಮರೆತು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಈಗಾಗಲೇ ದಾವಣಗೆರೆಯಲ್ಲಿ ದಿನನಿತ್ಯ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿದ್ದು, ಜನರು ಮಾತ್ರ ಜಾಗೃತರಾಗುತ್ತಿಲ್ಲ. ಜೀವಕ್ಕಿಂತ ಯುಗಾದಿ ಹಬ್ಬವೇ ಹೆಚ್ಚು ಎನ್ನುವಂತೆ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದು, ವ್ಯಾಪಾರದಲ್ಲಿ ತೊಡಗಿದ್ದಾರೆ.
ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರು ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.