ಚಿತ್ರದುರ್ಗ: ಕೋಟೆನಾಡಿನ 6 ತಾಲೂಕುಗಳ 189 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮುಂಜಾನೆ 4 ಗಂಟೆಗೆ ಅಂತ್ಯಗೊಂಡಿದೆ. ಒಟ್ಟು 3,421 ಸದಸ್ಯ ಸ್ಥಾನಗಳ ಪೈಕಿ 347 ಸದಸ್ಯರು ಅವಿರೋಧವಾಗಿ ಆಯ್ಕೆಯಾದರೆ, 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಮೇಲುಗೈ ಸಾಧಿಸಿದ್ದಾರೆ. ನಿನ್ನೆ ಬೆಳಗ್ಗೆ 8 ಗಂಟೆಯಿಂದ ಜಿಲ್ಲೆಯ 6 ಕೇಂದ್ರಗಳಲ್ಲಿ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಅರಂಭಿಸಲಾಯಿತು. 189 ಗ್ರಾ.ಪಂ.ಗಳಿಗೆ 3,420 ನೂತನ ಸದಸ್ಯರು ಆಯ್ಕೆಗೊಂಡಿದ್ದಾರೆ.
ಇತ್ತ ಗೆಲುವು ಸಾಧಿಸಿದ ಅಭ್ಯರ್ಥಿಗಳು ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜಿಲ್ಲಾ ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಬೆಂಬಲಿತ ಸದಸ್ಯರು 1,700ಕ್ಕೂ ಹೆಚ್ಚಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರು 820 ಕ್ಕಿಂತ ಹೆಚ್ಚು ಇದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು 300ಕ್ಕೂ ಹೆಚ್ಚಿದ್ದು, ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
38 ಗ್ರಾ.ಪಂ.ಯ 663 ಸ್ಥಾನಗಳು, ಹೊಳಲ್ಕೆರೆ ತಾಲೂಕಿನ 29 ಗ್ರಾ.ಪಂ.ಗಳ 460 ಸ್ಥಾನಗಳು, ಹೊಸದುರ್ಗ ತಾಲೂಕಿನ 33 ಗ್ರಾ.ಪಂ.ಗಳ 465 ಸ್ಥಾನ, ಚಳ್ಳಕೆರೆ ತಾಲೂಕಿನ 40 ಗ್ರಾ.ಪಂಯ 755 ಸ್ಥಾನ, ಹಾಗೂ ಮೊಳಕಾಲ್ಮೂರು ತಾಲೂಕಿನ 16 ಗ್ರಾ.ಪಂಗಳ 323 ಸ್ಥಾನಗಳ ಪೈಕಿ ಒಟ್ಟಾರೆ ಎಲ್ಲಾ ತಾಲೂಕುಗಳ ಪೈಕಿ 375 ಸ್ಥಾನಗಳನ್ನು ಮೊದಲೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಆರು ತಾಲೂಕುಗಳ ಪೈಕಿ ಕೆಲವು ಸ್ಥಾನಗಳಿಗೆ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ ಅಪರೂಪದ ಸನ್ನಿವೇಶಗಳು ನಡೆದರೆ, ಎರಡು ಮೂರು ಸ್ಥಾನಗಳಿಗೆ ಲಾಟರಿ ಮೂಲಕ ಗೆಲುವು ನಿರ್ಧರಿಸಲಾಯಿತು.
ಚಿತ್ರದುರ್ಗ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಪರಾಜಿತ ಅಭ್ಯರ್ಥಿ ಬೆಂಬಲಿಗರು ಮತ ನೀಡಿಲ್ಲವೆಂದು ಒಂದು ಕುಟುಂಬದ ಮನೆ ನುಗ್ಗಿ ಗಲಾಟೆ ನಡೆಸಿದ ಪ್ರಕರಣ ಎಸ್ಪಿ ಕಚೇರಿ ಮೆಟ್ಟಿಲೇರಿದೆ.