ಚಿತ್ರದುರ್ಗ : ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಷಡ್ಯಂತ್ರ ಮಾಡಿ ಬಿಜೆಪಿ ನಾಯಕರೇ ನನ್ನ ಸೋಲಿಸಿದರು ಎಂದು ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಪಂ ಚುನಾವಣಾ ಅಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ನನ್ನ ಜನ ಸೋಲಿಸಲಿಲ್ಲ. ಬದಲಾಗಿ ಸ್ವಪಕ್ಷದ ನಾಯಕರೇ ಸೋಲಿಗೆ ಕಾರಣವಾದ್ರು ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ನಾಯಕರೆ ನನ್ನ ಬಾದಾಮಿಯಲ್ಲಿ ಸೋಲಿಸಿದ್ರು ರಾಷ್ಟ್ರೀಯ ನಾಯಕರಾದ ಮೋದಿ, ಅಮಿತ್ ಶಾ ನನಗೆ ಎರಡು ಕಡೆಗೆ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿದರು. ಆದ್ರೆ, ಮೋದಿ, ಅಮಿತ್ ಶಾ ಅಂತವರು ಮಾತ್ರ ಎರಡು ಕಡೆ ಸ್ಪರ್ಧೆ ಮಾಡಬೇಕು.
ಶ್ರೀರಾಮಲು ಎರಡು ಕಡೆ ಗೆದ್ರೆ ಪ್ರಭಾವಿ ನಾಯಕನಾಗುತ್ತಾನೆ, ಮುಂದೆ ನಮಗೆ ಮುಳ್ಳು ಆಗ್ತಾನೆ ಎಂದು ಸೋಲಿಸಿದರು. ಆದ್ರೆ, ಮೊಳಕಾಲ್ಮೂರು ಕ್ಷೇತ್ರದ ಜನ ನನ್ನ ಕೈ ಹಿಡಿದ್ದಾರೆ. ಸದಾ ಕಾಲ ನಾನು ಅವ್ರ ಕಷ್ಟಕ್ಕೆ ಸ್ಪಂದಿಸುವ ನಾಯಕನಾಗಿದ್ದೇನೆ ಎಂದರು.
ಇನ್ನು, ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ 1400 ಅಲ್ಪ ಮತಗಳಿಂದ ಸೋತಿದ್ದೇನಿ. ಯಡಿಯೂರಪ್ಪ ನನಗೆ ಎರಡು ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಹೇಳಿದ್ರು. ನಾನು ಕೂಡ ಒಪ್ಪಿಗೆ ನೀಡಿದ್ದೆ.
ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರದ ಎರಡು ಓಡಾಟ ಮಾಡಿ ಪ್ರಚಾರ ಮಾಡಿದೆ. ಆದ್ರೆ, ನಮ್ಮ ಪಕ್ಷದವ್ರೇ ಸೋಲಿಗೆ ಕಾರಣವಾದ್ರು ಎಂದು ಬೇಸರ ವ್ಯಕ್ತಪಡಿಸಿದರು.