ಚಿತ್ರದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಯು ಆರು ತಾಲೂಕಿನ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಆದ್ರೆ ಜಿಲ್ಲಾಸ್ಪತ್ರೆಯಲ್ಲೀಗ ಸೂಕ್ತ ಚಿಕಿತ್ಸೆ ಸಿಗುವುದು ಮಾತ್ರ ಮರೀಚಿಕೆಯಾಗಿದೆ.
ಇಲ್ಲಿರುವ ಓಪಿಡಿ ಕೂಡಾ ಸ್ಥಗಿತಗೊಳಿಸಲಾಗಿದ್ದು, ಆರೋಗ್ಯ ಸಚಿವರ ಕ್ಷೇತ್ರವಿರುವ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿಯೇ ಸಾಮಾನ್ಯ ರೋಗಕ್ಕೂ ಚಿಕಿತ್ಸೆ ಸಿಗಲಾರದೆ ರೋಗಿಗಳು ಹೈರಾಣಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಓಪಿಡಿ ಸ್ಥಗಿತಗೊಳಿಸಲಾಗಿದೆ. ಓಪಿಡಿ ಬಂದ್ ಆದ ಹಿನ್ನೆಲೆ ಹೊರ ರೋಗಿಗಳಿಗೆ ಚಿಕಿತ್ಸೆ ಸಿಗದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಈ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಕ್ಕೂ ಚಿಕಿತ್ಸೆ ಸಿಗುತ್ತಿಲ್ಲ. ಓಪಿಡಿ ಸ್ಥಗಿತಗೊಳಿಸಿದ್ದರಿಂದ ಯಾವುದೇ ರೋಗ ಬಂದರೂ ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ತೆರಳಿ ಅಂತಾ ನಾಮಫಲಕ ಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಓಪಿಡಿ ಸ್ಥಗಿತ ಆದ್ರೆ ಆ ಆಸ್ಪತ್ರೆಗೆ ಬಡ ರೋಗಿಗಳು ತೆರಳಿದ್ರೆ ಉಚಿತವಾಗಿ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ. ಆ ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗೆ ನೂರಾರು ರೂಪಾಯಿ ಶುಲ್ಕ ವಿಧಿಸಲಾಗ್ತಿದೆ. ಹೀಗಾಗಿ ಬಡ ರೋಗಿಗಳು ಸಾಮಾನ್ಯ ರೋಗಕ್ಕೂ ಚಿಕಿತ್ಸೆ ಪಡೆಯಲು ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಹ ನೀಡುವವರಿಲ್ಲದೇ ಆಕ್ರೋಶ ವ್ಯಕ್ತಪಡಿಸಿರುವ ರೋಗಿಗಳು ಹಾಗೂ ಅವರ ಪೋಷಕರು, ಸಂಬಂಧಿಕರು ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಓಪಿಡಿ ತೆರೆಯುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಸವರಾಜ್ ಅವರು ಕೋವಿಡ್ ನೆಪ ಹೇಳುತ್ತಿದ್ದಾರೆ. ಅಲ್ಲದೇ ಕೆಲವು ದಿನಗಳ ಕಾಲ ರೋಗಿಗಳೇ ಸಹಕರಿಸಿ ಅಂತಾ ಮನವಿ ಮಾಡುತ್ತಿದ್ದಾರೆ. ಈ ವಿಚಾರಗಳನ್ನು ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೀರಾ ಎನ್ನುವ ಪ್ರಶ್ನೆಗೆ, ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಳುಹಿಸುತ್ತಿರುವ ವಿಷಯ ಸಚಿವರಿಗೆ ತಿಳಿಸಿಲ್ಲ. ನಾವು ಹಾಗು ಜಿಲ್ಲಾಧಿಕಾರಿ ಸೇರಿ ತೀರ್ಮಾನಿಸಿದ್ದೇವೆ ಎನ್ನುತ್ತಾರೆ.
ಹಾಗಾಗಿ ಶೀಘ್ರದಲ್ಲೇ ಓಪಿಡಿ ಓಪನ್ ಮಾಡಿಸಿ, ಜನಸಾಮಾನ್ಯರಿಗೆ ಅಗತ್ಯ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಗುವಂತೆ ಮಾಡಬೇಕಿದೆ.