ಚಿತ್ರದುರ್ಗ:ಬರ ಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ. ಆದರೆ ಈ ಈರುಳ್ಳಿ ಬೆಳೆಗಾರರೀಗ ಆತಂಕದಲ್ಲಿದ್ದಾರೆ. ಕಾರಣ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ರದ್ದುಪಡಿಸಿರುವುದು.. ಹೌದು ಕೇಂದ್ರ ಸರ್ಕಾರದ ಈ ನಡೆ ಮಳೆಗಾಲದಲ್ಲಿ ಹೆಚ್ಚು ಈರುಳ್ಳಿ ಬೆಳೆದ ರೈತರಿಗೆ ಕಂಟಕವಾಗಿದೆ.
ಈರುಳ್ಳಿ ರಫ್ತು ರದ್ದು... ರೈತರನ್ನು ಕೇಂದ್ರ ಸರ್ಕಾರ ಸಾಲಗಾರರನ್ನಾಗಿ ಮಾಡಲು ಹೊರಟಿದೆ: ರೈತರ ಆಕ್ರೋಶ
ಇಷ್ಟು ದಿನ ಈರುಳ್ಳಿ ಬೆಲೆ ಏರಿಕೆ ಗ್ರಾಹಕರನ್ನು ಕಣ್ಣೀರಿಡುವಂತೆ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಈರುಳ್ಳಿ ರಫ್ತು ರದ್ದು ಆದೇಶದ ಬಳಿಕ ಅಳುವ ಸರದಿ ಈರುಳ್ಳಿ ಬೆಳೆಗಾರರದ್ದಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಮಹಾಮಳೆಗೆ ಕೆಲ ಕಡೆ ಮಾತ್ರ ಈರುಳ್ಳಿ ಬೆಳೆ ನೆಲಕಚ್ಚಿದ್ದು, ಇದರಿಂದ ಅದಾಗಲೇ ರೈತರು ಸಾಕಷ್ಟು ನಷ್ಟಕ್ಕೊಳಗಾಗಿದ್ದಾರೆ. ಈ ಮದ್ಯೆ ಇದೀಗ ಕೇಂದ್ರ ಸರ್ಕಾರ ರಫ್ತು ರದ್ದುಪಡಿಸಿರುವುದು ರೈತರನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ. ಇನ್ನು ಜಿಲ್ಲೆಯಲ್ಲಿ 12 ವರ್ಷಗಳಿಂದ ಮಳೆ ಇಲ್ಲದೆ ಹೈರಾಣಾಗಿದ್ದ ರೈತರಿಗೆ ಈ ಬಾರಿ ವರುಣ ಕೃಪೆ ತೋರಿದ್ದು, ಬೆಳೆ ಚೆನ್ನಾಗಿ ಬಂದಿತ್ತು. ಹೀಗಾಗಿ ಸುಮಾರು ಒಂದು ಲಕ್ಷ ರೈತರು ಈರುಳ್ಳಿ ಬೆಳೆದಿದ್ದು, ಇದೀಗ ಈ ರೈತರಿಗೆ ಕೇಂದ್ರ ಸರ್ಕಾರದ ನೀತಿ ಉರುಳಾಗಿ ಪರಿಣಮಿಸಿದೆ.
ಕೆಲ ದಿನಗಳ ಹಿಂದೆ 50 ಕೆಜಿ ಈರುಳ್ಳಿಗೆ 1600 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು, ಇದೀಗ ಬೆಲೆ ಕೆಜಿಗೆ 10 ರಿಂದ 20 ರೂಪಾಯಿಗೆ ತಲುಪಿರುವ ಮಧ್ಯೆ ರಫ್ತು ನೀತಿ ರದ್ದುಪಡಿಸಿರುವುದು ಚಿತ್ರದುರ್ಗ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈರುಳ್ಳಿ ಬೆಳೆಯಲು ರೈತರು ಒಂದು ಎಕರೆಗೆ 60,000 ರೂಪಾಯಿ ವ್ಯಯ ಮಾಡಿರುತ್ತಾರೆ. ಈಗ ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿಲ್ಲಿಸಿ ರೈತರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ ಎಂದು ರೈತ ಮುಖಂಡರು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ ತನ್ನ ಈರುಳ್ಳಿ ರಫ್ತು ರದ್ದು ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದು ಬಡ ರೈತರ ನೆರವಿಗೆ ಧಾವಿಸಬೇಕೆಂಬುದು ರೈತರ ಅಳಲು.