ಚಿತ್ರದುರ್ಗ:ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಮಾಡಿದ್ದ ಬೆನ್ನಲ್ಲೇ ಅದೆಷ್ಟೊ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಕ್ರೀಡಾ ಇಲಾಖೆಯಲ್ಲಿ ಸತತ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನ ಇಲ್ಲದೆ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಕೋಟೆನಾಡು ಚಿತ್ರದುರ್ಗದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಎಂಟು ತಿಂಗಳಿನಿಂದ ವೇತನವಿಲ್ಲದೆ ಬದುಕು ದುಸ್ತರವಾಗಿದೆ. ಕೊರೊನಾ ಆರಂಭವಾಗುವ ಮೊದಲೇ ವೇತನ ಕಾಣದ ಹೊರಗುತ್ತಿಗೆ ನೌಕರರು 8 ತಿಂಗಳ ವೇತನಕ್ಕಾಗಿ ದಿನನಿತ್ಯ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಲಾಕ್ಡೌನ್ ಘೋಷಿಸಿದ ಬಳಿಕ ವೇತನವಿಲ್ಲದೆ ಜೀವನ ನಡೆಸಲಾಗದೆ ನೌಕರರು ಹೈರಾಣಾಗಿದ್ದಾರೆ. ತಿಂಗಳುಗಳೇ ಉರುಳಿದರು ಕೂಡ ದುಡಿದ ಹಣ ಮಾತ್ರ ಕೈ ಸೇರುತ್ತಿಲ್ಲ. ಜಿಮ್, ಸ್ವಿಮಿಂಗ್ ಪೂಲ್, ಸಿಂಥೆಟಿಕ್ ಟ್ರ್ಯಾಕ್, ಹಾಗೂ ಕ್ರೀಡಾಂಗಣವನ್ನು ಪೋಷಣೆ ಮಾಡುವ ನೌಕರರಿಗೆ 8 ತಿಂಗಳಿನಿಂದ ವೇತನ ಆಗಿಲ್ಲ. ಇಡೀ ರಾಜ್ಯದಲ್ಲೇ ಕ್ರೀಡಾ ಇಲಾಖೆಯಲ್ಲಿ ವೇತನ ನೀಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಈ ಕೆಲಸ ಆಗಿಲ್ಲ. ಇದಕ್ಕೆಲ್ಲ ಅಸಿಸ್ಟೆಂಟ್ ಡೈರೆಕ್ಟರ್ ನಾಗರಾಜ್ ನಿರ್ಲಕ್ಷ್ಯತನವೇ ಪ್ರಮುಖ ಕಾರಣ ಎಂದು ನೌಕರರೊಬ್ಬರು ಆರೋಪಿಸಿದ್ದಾರೆ.