ಅಂಕಲಿ ಮಠದಲ್ಲಿರುವ ಈ ಗುಹೆ ಕೌತುಕಗಳ ಆಗರ. ಯುದ್ಧದ ವೇಳೆ ರಾಜರು ತಮ್ಮ ಕುಟುಂಬವನ್ನು ಇದೇ ಗುಹೆಯಲ್ಲಿಟ್ಟು ರಕ್ಷಿಸುತ್ತಿದ್ದರಂತೆ. ಕಾಲಾನಂತರ ಹಿಂದೂ ಧರ್ಮ ಸಾರಲು ಬಂದಿದ್ದ, ಅಂಕಲಿ ಮಠದ ಪರದೇಶಪ್ಪ ಸ್ವಾಮೀಜಿ ಇದೇ ಗುಹೆಯಲ್ಲಿ ಕೆಲವರ್ಷ ಇದ್ದು, ನಂತರ ಇಲ್ಲೇ ಲಿಂಗೈಕ್ಯರಾದರಂತೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ವಾಮೀಜಿಯ ಸಮಾಧಿ ಗುಹೆಯಲ್ಲಿದೆ ಅಂತಾರೆ ಇತಿಹಾಸಕಾರರು. ಗುಹೆಯ ಜೊತೆ ವಿಭಿನ್ನ ಕೋಟೆಗಳು ಹಾಗೂ ಶಿವಲಿಂಗ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ.
ಗುಹೆಯ ವಿಶೇಷತೆ ಏನು...?
ಈ ಐತಿಹಾಸಿಕ ಗುಹೆಯಲ್ಲಿ ಪ್ರಮುಖವಾಗಿ ನಂದಿ ದ್ವಾರ, ಗಜ ದ್ವಾರ, ಸಿಂಹ ದ್ವಾರ ಎಂಬ ಮೂರು ದ್ವಾರಗಳಿವೆ. ಜೊತೆಗೆ ರಹಸ್ಯವಾಗಿ ಮಾತನಾಡುವ ಕೋಣೆ, ಪರದೇಶಪ್ಪ ಸ್ವಾಮಿಜೀಯ ಗದ್ದುಗೆ, ಪೂಜೆ ಮಾಡಲು ಶಿವಲಿಂಗ, ಪುಟ್ಟ ಸ್ನಾನದ ಕೊಳ, ದೀಪಗಳನ್ನು ಇಡಲು ಪುಟ್ಟ ಕೋಣೆಗಳು, ರಹಸ್ಯ ರಸ್ತೆಗಳು, ಮಲಗುವ ಕೋಣೆ, ಖಜಾನೆ ರೂಮ್ ಕೂಡ ಇಲ್ಲಿದೆ. ಇಂತಹ ಕತ್ತಲ ಗುಹೆಯಲ್ಲಿ ಗಾಳಿ, ಬೆಳಕು, ಕುಡಿಯುವ ನೀರಿಗಾಗಿ ಅಂದಿನ ಜನ ಮಾಡಿಕೊಂಡಿದ್ದ ವ್ಯವಸ್ಥೆಯನ್ನ ಕೂಡ ಕಾಣಬಹುದು.
ಸಾಕಷ್ಟು ವಿಶೇಷತೆ ಹೊಂದಿರುವ ಕೋಟೆನಾಡಿನ ಈ ಗುಹೆಯನ್ನ ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಬೇಕಿದೆ. ಜೊತೆಗೆ ಗುಹೆಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದ್ರೆ ಇನ್ನಷ್ಟು ಪ್ರವಾಸಿಗರು ಇತ್ತ ಕಣ್ಣು ಹಾಯಿಸುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯ.