ಚಿತ್ರದುರ್ಗ:ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಬಸವಶ್ರೀ ಪ್ರಶಸ್ತಿಗೆ ಮುರುಘಾ ಮಠ ಆಯ್ಕೆ ಮಾಡಿದೆ. 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ (ಮರಣೋತ್ತರ) ಯನ್ನು ಪುನೀತ್ ರಾಜ್ಕುಮಾರ್ ಅವರಿಗೆ ನೀಡುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಕಟಿಸಿದ್ದಾರೆ.
ಬಾಲನಟನಾಗಿ, ನಾಯಕ ನಟನಾಗಿ ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸಮಾಜ ಸೇವೆ ಸಲ್ಲಿಸಿದ್ದಾರೆ. ಇಂತಹ ಮೇರುನಟ ಇತ್ತೀಚೆಗೆ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಅವರ ಕುಟುಂಬದವರಿಗೆ ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಥಮರ ಆಶೀರ್ವಾದ ಸದಾ ಇರಲಿ. ಮಾನವೀಯ ಮೌಲ್ಯಗಳನ್ನೊಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕ ವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದು ಮುರುಘಾ ಶರಣರು ಶ್ಲಾಘಿಸಿದ್ದಾರೆ.