ಚಿತ್ರದುರ್ಗ: ಜಿಲ್ಲೆಯಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಬೇಚರಾಕ್ ಗ್ರಾಮಗಳನ್ನು (ದಾಖಲೆ ರಹಿತ ಜನವಸತಿ ಪ್ರದೇಶ) ಗುರುತಿಸಲಾಗಿದೆ. ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿ: ಡಿಸಿಗೆ ಸಂಸದರ ಸೂಚನೆ
ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಬೇಚರಾಕ್ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಎ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಆರು ತಾಲೂಕುಗಳಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 2014ಕ್ಕೂ ಮೊದಲು ಬೇಚರಾಕ್ ಗ್ರಾಮಗಳನ್ನು (ಹಟ್ಟಿ, ತಾಂಡಾ ಇತ್ಯಾದಿ) ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡುವುದು ಸರ್ಕಾರ ಪ್ರಮುಖ ಉದ್ದೇಶವಾಗಿತ್ತು. ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಕೇವಲ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ 400ಕ್ಕೂ ಹೆಚ್ಚು ಬೇಚರಾಕ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಅಧಿಸೂಚನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಕೇವಲ 80 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಅದಷ್ಟು ಬೇಗ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಂಸದರು ಸೂಚನೆ ನೀಡಿದರು.