ಚಿತ್ರದುರ್ಗ: ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ಹಾಕುವ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಕೊನೆಯವರೆಗೂ ದುಬಾರಿ ದಂಡ ಹಾಕದೆ, ಮೊದಲು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇಡೀ ಜಿಲ್ಲೆಯ ಪಿಎಸ್ಐ, ಎಸ್ಐಗಳು ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಿ ನಿಯಮ ಮತ್ತು ದುಬಾರಿ ದಂಡದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಧರಿಸಿದ್ದಾರೆ.
ಜಾರಿಗೆ ಬಾರದ ಮೋಟಾರ್ ವಾಹನ ಕಾಯ್ದೆ ಈಗ ಡ್ರಿಂಕ್ ಅಂಡ್ ಡ್ರೈವ್ಗೆ ಮಾತ್ರ ಕಡ್ಡಾಯವಾಗಿ ದುಬಾರಿ ದಂಡ ಹಾಕಲಾಗುತ್ತಿದೆ. ಉಳಿದಂತೆ ಹೆಲ್ಮೆಟ್, ಡಿಎಲ್, ಆರ್ಸಿ ಬುಕ್ಗಳಿಗೆ ಹಳೆ ದಂಡವನ್ನೇ ಹಾಕಲಾಗುತ್ತಿದೆ. ಸೆಪ್ಟಂಬರ್ ಅಂತ್ಯದವರೆಗೆ ಜಾಗೃತಿ ಮೂಡಿಸಿ ಆಕ್ಟೋಬರ್ 1 ರಿಂದ ಪರಿಷ್ಕೃತ ದಂಡ ವಿಧಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಅಧಿಕಾರಿ ಮೋಟರ್ ವಾಹನ ಕಾಯ್ದೆ ಅಡಿ ದೂರು ದಾಖಲಿಸುವಾಗ "ಬಾಡಿ ಕ್ಯಾಮೆರಾ'' ಕಡ್ಡಾಯವಾಗಿ ಹಾಕಿಕೊಂಡಿರಬೇಕು. ದಂಡ ವಿಧಿಸುವ ಪೊಲೀಸರು ಬಾಡಿ ಕ್ಯಾಮೆರಾ ಹಾಕಿಕೊಳ್ಳುವುದರಿಂದ ಸವಾರರು ಮತ್ತು ಪೊಲೀಸರ ನಡುವಿನ ಸಂಭಾಷಣೆ ರೆಕಾರ್ಡ್ ಆಗುತ್ತೆ. ಅಲ್ಲದೆ ಅಕ್ರಮಕ್ಕೆ ಅವಕಾಶ ಇರೋದಿಲ್ಲ. ಅದಕ್ಕಾಗಿಯೇ ಜಿಲ್ಲೆಯಲ್ಲಿ 120 ಬಾಡಿ ಕ್ಯಾಮೆರಾಗಳಿವೆ ಎನ್ನುತ್ತಾರೆ ಜಿಲ್ಲಾ ಎಸ್ಪಿ ಡಾ.ಕೆ. ಅರುಣ್.
ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಚಿತ್ರದುರ್ಗ ಜಿಲ್ಲಾ ಪೊಲೀಸರು ಮೊದಲು ಜಾಗೃತಿ ಮೂಡಿಸಿ ನಂತರ ದಂಡಾಸ್ತ್ರಕ್ಕೆ ಮುಂದಾಗಿರುವುದು ಇತರರಿಗೂ ಆದರ್ಶವಾಗಿದೆ.