ಚಿತ್ರದುರ್ಗ:ಕಾಂಗ್ರೆಸ್ ಪಕ್ಷ ಮೂರು ಭಾಗವಾಗಿದೆ. ಸಿಎಂ ಸ್ಥಾನಕ್ಕೆ ತಮ್ಮ ತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಅಧ್ಯಕ್ಷ ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪೈಪೋಟಿಗೆ ಬಿದ್ದವರಂತೆ ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳುತ್ತಾರೆ. ಬಿಜೆಪಿ ಬಗ್ಗೆ ಮಾತನಾಡುವ ಮೊದಲು ತಮ್ಮ ಪಕ್ಷದ ಬಾಗಿಲುಗಳನ್ನು ಸರಿಪಡಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ಸಚಿವ ಶ್ರೀರಾಮುಲು ಟಾಂಗ್ ನೀಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಮುಂದಿನ ಬಾರಿ ಬಾದಾಮಿ ಕ್ಷೇತ್ರದಿಂದ ಗೆಲುವು ಕಷ್ಟವಾಗಲಿದೆ. ಚಾಮುಂಡೇಶ್ವರಿಯಲ್ಲಿ ಸೋತ ಮೇಲೆ ಬಾದಾಮಿಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದರು. ನಂತರ ಷಡ್ಯಂತರ ರೂಪಿಸಿ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ಶ್ರೀರಾಮುಲು ಆರೋಪಿಸಿದರು.
ನಮ್ಮ ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ ಎಂದು ಅವರಿವರ ಮಾತು ಕೇಳಿ ಸಿದ್ದರಾಮಯ್ಯ ಹೇಳಿಕೆ ನೀಡುವುದು ಸಮಂಜಸವಲ್ಲ. ಪುಕ್ಕಟ್ಟೆ ಪಬ್ಲಿಸಿಟಿಗಾಗಿ ಸಿದ್ದರಾಮಯ್ಯ ಈ ಹೇಳಿಕೆಗಳನ್ನು ನೀಡುತ್ತಾರೆ. ಕೊಡಗಿನ ಜನರು ಬೀಫ್ ತಿನ್ನುತ್ತಾರೆ ಎಂದು ಹೇಳಿಕೆ ನೀಡುತ್ತಾರೆ, ಬಳಿಕ ವಾಪಸ್ ತೆಗೆದುಕೊಳ್ಳುತ್ತಾರೆ. ಹಿಂದೂ-ಮುಸ್ಲಿಂ ಕ್ರಾಸ್ ಪದ ಬಳಸುತ್ತಾರೆ. ಅಲ್ಲದೆ ರಾಮ, ಹನುಮ ಜಯಂತಿ ಗೊತ್ತಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡ ಬಳಿಕ ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ತಮ್ಮ ಸರ್ಕಾರ ಸರಿಯಾದ ಆಡಳಿತ ನೀಡಿಲ್ಲವೆಂದು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುವುದು, ಟೀಕೆ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರವಾದ ಆಡಳಿತ ನೀಡಿದ್ದು, ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದೆ. ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕನಾಗಿ ಜವಾಬ್ದಾರಿಯುತ ಹೇಳಿಕೆ ನೀಡಬೇಕು. ತಮ್ಮ ಜವಾಬ್ದಾರಿ ತಿಳಿದುಕೊಂಡು ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.
ಓದಿ:ಸಿದ್ದರಾಮಯ್ಯಗೆ ಮತಿಭ್ರಮಣೆ, ಹಾಗಾಗಿ ಹೆಚ್‌ಡಿಕೆಯನ್ನ ಸಿಎಂ ಸ್ಥಾನದಿಂದ ಇಳಿಸಿದರು- ಶ್ರೀರಾಮುಲು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಬದಲಾವಣೆ ಕುರಿತು ಮಾತನಾಡುವುದು ಅದು ಅವರ ವೈಯಕ್ತಿಕ ವಿಚಾರ ಮಾತ್ರ. ಪಕ್ಷಕ್ಕೆ ತನ್ನದೇ ಆದ ನಿಲುವು, ನಾಯಕರಿದ್ದಾರೆ. ಬಿಎಸ್ವೈ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಶಾಸಕ ಯತ್ನಾಳ್ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಬರುವ ದಿನಗಳಲ್ಲಿ ಅವರಿಗೂ ಕೂಡ ಸಚಿವ ಸ್ಥಾನ ಸಿಗಬಹುದು. ಯತ್ನಾಳ್ ಅವರ ನಿಲುವುಗಳು ಪಾರ್ಟಿ ನಿಲುವುಗಳಲ್ಲ ಎಂದು ಸಚಿವ ಶ್ರೀ ರಾಮುಲು ಸ್ಪಷ್ಟಪಡಿಸಿದರು.