ಚಿತ್ರದುರ್ಗ: ಸ್ವತಂತ್ರ ಬಂದು ಇಷ್ಟು ವರ್ಷ ಆಡಳಿತ ನಡೆಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಮಂದಿ ದಲಿತರನ್ನ ಸಿಎಂ ಮಾಡಿದ್ದಾರೆಂದು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಚಿತ್ರುದುರ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ.. ನಗರದಲ್ಲಿ ಮಾತನಾಡಿದ ಅವರು, ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಬಿಜೆಪಿಗೆ ಸವಾಲ್ ಹಾಕುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನವರು ದಲಿತರನ್ನ ಸಿಎಂ ಮಾಡಲು ಆಗಿಲ್ಲ, ತುಳಿದಿದ್ದೇವೆ ಎಂದು ಸಿದ್ದರಾಮಯ್ಯ ಒಪ್ಪಿಕೊಳ್ಳಲಿ. ಮುಂದೆಯೂ ನಾನೇ ಸಿಎಂ ಎಂದು ಹೇಳುವ ನಿಮಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಮಾಡಿದರು.
ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ದಲಿತರನ್ನ ಸಿಎಂ ಮಾಡಲ್ಲ. ಇನ್ನೂ ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಸಿಎಂ ಎಂದು ಕೂಗಿಸುತ್ತಾರೆ. ಒಂದು ಕಡೆ ಡಿಕೆಶಿ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಾರೆ. ಇಂಥವರಿಗೆ ಬಿಜೆಪಿ ಪಕ್ಷದ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದ್ಯಾ, ಇವರು ಅಯೋಗ್ಯರು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ದಲಿತ ರಾಷ್ಟ್ರಪತಿ ಮಾಡಿದ್ದು ನಮ್ಮ ಬಿಜೆಪಿ ಪಕ್ಷ. ರಾಜ್ಯದಲ್ಲಿರುವ ರಾಜ್ಯಪಾಲರು ಯಾರು ಅವರು ದಲಿತರು. BJP ರಾಷ್ಟ್ರ ಭಕ್ತಿ ಇರುವವರನ್ನ ಮಾಡುತ್ತೇವೆ, ಜಾತಿ ನೋಡಿಯಲ್ಲ ಎಂದರು. ಸಾಮಾಜಿಕ ನ್ಯಾಯ ಎಂದು ಧರಂಸಿಂಗ್ ಅವರನ್ನ ಉದ್ದಾರ ಆಗಲು ಬಿಡಲಿಲ್ಲ. ಅಷ್ಠೇ ಯಾಕೆ, ಡಾ.ಜಿ. ಪರಮೇಶ್ವರ ಅವರನ್ನ ಸಿದ್ದರಾಮಯ್ಯ ಸೋಲಿಸಿದರು, ಇದು ರಾಜ್ಯಕ್ಕೆ ಗೊತ್ತು ಬಿಡಿ ಎಂದರು.
ಇದನ್ನೂ ಓದಿ : ದಕ್ಷಿಣದಲ್ಲಿ ಕೇಸರಿ ಕೋಟೆ ಕಟ್ಟಿ ಮೆರೆದ 'ಶಿಖರಸೂರ್ಯ'.. ಸ್ವಪಕ್ಷೀಯರೇ ಅಡ್ಡಿಯಾದ್ರೂ ಸೊಪ್ಪು ಹಾಕದ ನಾಯಕನ ಏರಿಳಿತ..
ಬಿಜೆಪಿಯಲ್ಲಿ ಯಾರೇ CM ಆದರು ಭ್ರಷ್ಟರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಭ್ರಷ್ಟರ ಬಾಯಲ್ಲಿ ಎಂಥ ಮಾತು ಬರುತ್ತೆ ನೋಡಿ, ಭ್ರಷ್ಟ ಆಗಿದ್ದ CM ಯಾಕೆ ಸರ್ಕಾರ ಕೆಡವಿಕೊಂಡರು. ಸಿದ್ದರಾಮಯ್ಯ ಯಾಕೆ ಚಾಮುಂಡೇಶ್ವರಿಯಲ್ಲಿ ಸೋತರು ಹೇಳಿ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹೋಗಿದೆ. ಹಾಗಾಗಿ, ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ರಾಜ್ಯದಲ್ಲಿ ನೀಡುತ್ತೇವೆ ಎಂದು ಸಚಿವ ಈಶ್ವರಪ್ಪ ಗುಡುಗಿದರು.