ಚಿತ್ರದುರ್ಗ :ನೀರು ಕೃಷಿಗೆ, ಕೈಗಾರಿಕೆ ಜತೆಗೆ ಕುಡಿಯೋಕೆ ಕೂಡ ಬೇಕೇ ಬೇಕು. ಇಂತಹದೊಂದು ಬಹುದೊಡ್ಡ ಮಹತ್ವಾಕಾಂಕ್ಷೆಯ ಉದ್ದೇಶ ಇಟ್ಟುಕೊಂಡು ಜನ್ಮತಳೆದಿದ್ದೇ ಭದ್ರಾ ಮೇಲ್ದಂಡೆ ಯೋಜನೆ. 2008ರ ಅಂದಿನ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬೃಹತ್ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಇಂದಿನ ಹಾಲಿ ಮುಖ್ಯಮಂತ್ರಿಗಳು.
ಆದರೆ, ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಿದ್ದ ಅದೇ ಭದ್ರಾ ಮೇಲ್ದಂಡೆ ಯೋಜನೆ ಕಳೆದ 14 ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ, ಬೇಕೋ ಬೇಡವೋ ಎನ್ನುವ ರೀತಿ ಸಾಗುತ್ತಿದೆ. ಈ ನಡುವೆ ಕರ್ನಾಟಕದ ನೀರಾವರಿ ಯೋಜನೆಗೆ ಆಂಧ್ರಪ್ರದೇಶ ಕಿರಿಕ್ ಮಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರ ಎಚ್ಚೆತ್ತಿದೆ.
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಜಿಲ್ಲಾ ಸಂಸದರು ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ನಡೆಸಿ ಶೀಘ್ರವೇ ಕೇಂದ್ರ ಮಂತ್ರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ, ನಾಡಿನ ಮೊಟ್ಟ ಮೊದಲ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಪುರಸ್ಕಾರ ಒದಗಿಸುವುದಾಗಿ ನೀರಾವರಿ ಸಚಿವರು ಭರವಸೆ ನೀಡಿದ್ದಾರೆ.
ಇನ್ನು ಈ ಕರ್ನಾಟಕದ ಬೃಹತ್ ನೀರಾವರಿ ಯೋಜನೆ, ಚುನಾವಣೆ ಹೊತ್ತಲ್ಲಿ ರಾಜಕಾರಣಿಗಳ ಬೇಳೆ ಬೇಯಿಸಿಕೊಳ್ಳುವ ಯೋಜನೆ ಆಗುತ್ತಿದೆ ಅನ್ನುವ ಸಂಶಯ ಮೂಡುತ್ತಿದೆ. ಸಾವಿರಾರು ಕೋಟಿ ವೆಚ್ಚ ಮಾಡಿದರೂ ಕೇವಲ ಶೇ.40ರಷ್ಟು ಮಾತ್ರ ಯೋಜನೆಯ ಕಾಮಗಾರಿ ಮುಗಿದಿದೆ.