ಚಿತ್ರದುರ್ಗ: ಹಿಜಾಬ್, ಸೆರಗು, ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ನಡುವಿನ ಕಂದಕ ಹೆಚ್ಚುತ್ತಿದೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆಂದು ಎನಿಸುತ್ತಿದೆ. ಡಿಕೆ ಶಿವಕುಮಾರ್ ಅವರು ಕೂಡ ತಾನೇ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹತಾಶೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಂದಲೇ ಹಿಜಾಬ್ ಗೊಂದಲ ಸೃಷ್ಟಿಯಾಗಿದ್ದು ಎಂದು ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ. ಅಲ್ಲದೇ ದೇಶದ ಇತಿಹಾಸ ಹೇಳುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಅರ್ಥ ಹೀನ ಎನ್ನುವುದು ಸಮಂಜಸವಲ್ಲ. ಯಾವುದೇ ಒಂದು ಜಾತಿ, ಧರ್ಮ ತೆಗಳುವುದು ಮತ್ತು ಬೇರೊಬ್ಬರಿಗೆ ನೋವಾಗುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಸಿದ್ಧರಾಮಯ್ಯ ಸಿಎಂ ಆಗಿದ್ದವರು, ತೂಕವಾಗಿ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಅವರ ಮಾತುಗಳು ಅವರಿಗೇ ಮಾರಕ ಆಗಲಿವೆ ಎಂದು ಹೇಳಿದರು.