ಚಿತ್ರದುರ್ಗ :ಜನರು ಕಾಂಗ್ರೆಸ್ ಪರವಾಗಿದ್ದರೆ ಯಾಕೆ ಅವರನ್ನು ಮನೆಯಲ್ಲಿ ಕೂರಿಸುತ್ತಿದ್ದರು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಸಚಿವರು ಈ ಕುರಿತು ಮಾತನಾಡಿದರು. ಕಾಂಗ್ರೆಸ್ ಬಗ್ಗೆ ಜನರಿಗೆ ವಿರೋಧವಿದೆ, ಅವರು ಅದರಿಂದ ಹೊರ ಬರಲು ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿಯೂ ಕೂಡ ನಾವೇ ಗೆದ್ದು ಅಧಿಕಾರ ಮಾಡುತ್ತೇವೆ ಎಂದರು.
ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿ ಸಿ ಪಾಟೀಲ್ ಮೇಲೇ ಭ್ರಷ್ಟಾಚಾರದ ಆರೋಪ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾಕೆ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಇರಲ್ಲಿಲ್ಲವೇ, ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರಲಿಲ್ಲವೇ?ಎಂದು ಪ್ರಶ್ನಿಸಿದರು.
ಸಿಲ್ವರ್ ಬ್ರಿಡ್ಜ್ ಮಾಡುವಾಗ 500 ಕೋಟಿ ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಎಂಬ ಆರೋಪ ಬಂದಿತ್ತಲ್ಲ. ಆರೋಪ ಮಾಡುವವರು ಇದ್ದೇ ಇರುತ್ತಾರೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.
ಯಾವಾಗ ಕೆಲಸ ಮಾಡಲು ಅವರಿಗೆ ಅವಕಾಶ ಸಿಗುವುದಿಲ್ಲ ಆಗ ಅಸಮಾಧಾನದಿಂದ ಈ ರೀತಿ ಆರೋಪ ಮಾಡುತ್ತಾರೆ. ಇದರ ಬಗ್ಗೆ ಯಾವುದೇ ತನಿಖೆ ಆಗಲಿ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಎಲ್ಲವೂ ಆನ್‌ಲೈನ್ ಟೆಂಡರ್ ಆಗುತ್ತದೆ. ಟೆಂಡರ್‌ದಾರ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ಹಣ ಕಟ್ಟುತ್ತಾನೆ. ಆನ್‌ಲೈನ್‌ನಲ್ಲಿ ಕಂಪನಿಗಳಿಗೆ ಹಣ ಹೋಗುತ್ತದೆ. ಇಲ್ಲಿ ಎಲ್ಲವೂ ಪಾರದರ್ಶಕತೆ ಇರುತ್ತದೆ ಎಂದರು.