ಹೊಸದುರ್ಗದ ಶ್ರೀ ಕಂಚೀವರದರಾಜ ಸ್ವಾಮಿ ದೇವಸ್ಥಾನದಲ್ಲಿ ವಿಶಿಷ್ಠ ಸಂಕ್ರಾಂತಿ ಆಚರಣೆ ಚಿತ್ರದುರ್ಗ:ಹೊಸದುರ್ಗ ತಾಲೂಕಿನ ಆರಾಧ್ಯದೈವ ಶ್ರೀ ಕಂಚೀವರದರಾಜ ಸ್ವಾಮಿ ನೆಲೆಸಿರುವ ಕಂಚೀಪುರ ಗ್ರಾಮದಲ್ಲಿ ವಿಶೇಷ ಸಂಕ್ರಾಂತಿ ಆಚರಣೆ ನಡೆಯುತ್ತದೆ. ಹಬ್ಬಕ್ಕೂ ಮುಂಚಿತವಾಗಿ ಶುರುವಾಗುವ ವೃತಾಚರಣೆಯು ಸಂಕ್ರಾಂತಿ ದಿನ ಮುಕ್ತಾಯವಾಗುತ್ತದೆ. ಅಂದು ಕಂಚಪ್ಪನ ದೇವಾಲಯದಲ್ಲಿ ಪೂಜೆ ನಂತರ ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಕಾಡಿಗೆ ಬೇಟೆ ಹೋಗುವ ಪದ್ಧತಿಯಿದೆ.
ಬೇಟೆ ಎಂದರೆ ಪ್ರಾಣಿ ಕೊಲ್ಲುವುದಲ್ಲ. ಒಂದು ಜೀವಂತ ಮೊಲವನ್ನು ಬೇಟೆಯಾಡಿ ತರಲಾಗುತ್ತದೆ. ಹೀಗೆ ತಂದ ಮೊಲಕ್ಕೆ ಬಂಗಾರದ ಓಲೆ ಹಾಕಿ, ರಾತ್ರಿ ವರದಯ್ಯನ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಮರಳಿ ಕಾಡಿಗೆ ಬಿಡಲಾಗುತ್ತದೆ. ನಂತರ ಸ್ವಾಮಿಯ ಉತ್ಸವ ನಡೆಯುತ್ತದೆ.
ಪ್ರಾಣಿ ಹಿಂಸೆ ಇಲ್ಲ: ಬೇಟೆಗೆ ಹೋದವರು ಮೊಲ ಸಿಗದೇ ಬರಿಗೈಯಲ್ಲಿ ವಾಪಸ್ ಬಂದರೆ ಮೊಲ ಸಿಗುವವರೆಗೂ ಮತ್ತೆ ಮೂರು ದಿನ ಬೇಟೆಗಾಗಿ ಹೋಗಬೇಕು. ಮೂರನೇ ದಿನ ಬೇಟೆ ಸಿಗದಿದ್ದರೆ ಅಂದು ತೆಂಗಿನ ಕಾಯಿಗೆ ಪೂಜೆ ಸಲ್ಲಿಸಿ ಬಿಡುತ್ತಾರೆ. ಮೊಲ ಸಿಗದಿದ್ದರೆ ಮೂರು ದಿನವೂ ಹಬ್ಬ ಮುಂದುವರೆಯುತ್ತದೆ.
ಈಗ ಎಲ್ಲಾ ಊರುಗಳಂತೆ ವಲಸೆ ಹೋಗಿ ದುಡಿಮೆ ಮಾಡೋ ಜನರೇ ಹೆಚ್ಚು. ಬಹುತೇಕ ಸ್ನೇಹಿತರು, ಬಂಧು ಬಳಗದವರು ಹಬ್ಬಗಳಿಗೆ ಬರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಹರಟೆ, ಕಷ್ಟ ಸುಖ ಹಂಚಿಕೊಳ್ಳಲು ಬೇಟೆಯಂಥ ಕಾರ್ಯದಲ್ಲಿ ಭಾಗಿಯಾಗುವುದುಂಟು. ಯುವಕರೇ ಹೆಚ್ಚು ಬೇಟೆಗೆ ಹೋಗುವುದರಿಂದ ಮೊಲ ಯಾರು ಹಿಡಿಯುತ್ತಾರೆ ಎನ್ನುವ ಕುತೂಹಲ ಗ್ರಾಮಸ್ಥರಲ್ಲಿ ಇದ್ದೇ ಇರುತ್ತೆ. ದೇಗುಲದಲ್ಲಿ ನೆರೆದಿದ್ದ ಭಕ್ತರು ಕಾಡಿನಲ್ಲಿ ಬೇಗನೆ ಮೊಲ ಸಿಗಲಿ, ಸಂಕ್ರಾಂತಿ ಸಂಭ್ರಮ ಕಳೆಗಟ್ಟಲೆಂದು ಪ್ರಾರ್ಥಿಸುತ್ತಾರೆ. ಬೇಟೆಗಾರಿಕೆಯಲ್ಲಿ ನುರಿತ ಗ್ರಾಮದ 30 ಮಂದಿ ಮಡಿಬಟ್ಟೆಯುಟ್ಟು ಬೇಟೆಗಾರಿಕೆ ಪರಿಕರಗಳನ್ನು ಹೊತ್ತು ಕಂಚೀವರದರಾಜಸ್ವಾಮಿ ಗೋವಿಂದಾ..ಗೋವಿಂದಾ.. ಎನ್ನುತ್ತಾ ಸಮೀಪದ ಕಾಡಿಗೆ ತೆರಳುತ್ತಾರೆ.
ಈ ವೇಳೆ ದಾಸಯ್ಯರ ಶಂಕು, ಜಾಗಟೆ, ಕಹಳೆ ಮೊಳಗುತ್ತವೆ. ಮೊಲ ಹಿಡಿಯುವುದನ್ನು ನೋಡಲು 100 ಕ್ಕೂ ಅಧಿಕ ಮಂದಿ ಬೇಟೆಗಾರರ ಜೊತೆಗೆ ಕಾಡಿಗೆ ಹೋಗುತ್ತಾರೆ. ಕಾಡಿನ ಮಟ್ಟಿ ಸಮೀಪ ಮೊಲ ಓಡಾಡಿರುವ ಸುಳಿವು ನೋಡಿ ಬೇಟೆಗಾರರು ಒಂದರ ಪಕ್ಕ ಒಂದರಂತೆ 10 ಬಲೆಗಳನ್ನು ಹೂಡುತ್ತಾರೆ. ನಂತರ ಬೆತ್ತ ಹಿಡಿದು ಪೊದೆಯೊಳಗೆ ಮೊಲ ಅವಿತುಕೊಂಡಿರುವುದನ್ನು ಶೋಧಿಸುತ್ತಾರೆ. ಹೀಗೆ ಮೊಲ ಹಿಡಿಯಲಾಗುತ್ತದೆ. ಬಲೆಗೆ ಬಿದ್ದ ಮೊಲಕ್ಕೆ ಸ್ವಲ್ಪವೂ ಗಾಯ ಮಾಡದಂತೆ ಮೆರವಣಿಗೆ ಮೂಲಕ ಗ್ರಾಮದ ಕಂಚೀವರದರಾಜಸ್ವಾಮಿ ದೇವಾಲಯಕ್ಕೆ ತರುತ್ತಾರೆ. ಗ್ರಾಮದ ಜನರು ಮೊಲ ಸಿಕ್ಕಿದ ಸಂಭ್ರಮಕ್ಕೆ ಶಿಳ್ಳೆ, ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಾರೆ.
ಹೀಗಿದೆ ಪೂಜಾ ಕ್ರಮ: ಕಾಡಿನಿಂದ ತಂದ ಮೊಲಕ್ಕೆ ಮೊದಲು ಸ್ನಾನ. ನಂತರ ದೇವರ ಸನ್ನಿಧಿಯಲ್ಲಿ ನಾಮಧಾರಣೆ. ಆನಂತರ ಕಿವಿ ಚುಚ್ಚಿ ರಿಂಗ್, ಓಲೆ ಅಥವಾ ಗೆಜ್ಜೆ ಹಾಕುತ್ತಾರೆ. ಊರಿನ ಅಕ್ಕಸಾಲಿಗರು, ಮಗುವಿಗೆ ಕಿವಿ ಚುಚ್ಚುವ ವಿಧಾನದಲ್ಲೇ ನಿಧಾನವಾಗಿ ಮೊಲದ ಕಿವಿ ಚುಚ್ಚುತ್ತಾರೆ. ನಂತರ ನವ ವಧುವಿನಂತೆ ಹೂವಿನಿಂದ ಸಿಂಗರಿಸಿ, ದೇವರ ಮೂರ್ತಿ ಎದುರಿಗೆ ಮೂರು ಬಾರಿ ನೀವಾಳಿಸುತ್ತಾರೆ. ಮತ್ತೆ ಬುಟ್ಟಿಯಲ್ಲಿ ಕೂರಿಸಿ, ಅದನ್ನು ತಲೆ ಮೇಲೆ ದೇವರ ಮೂರ್ತಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಡೋಲು, ವಾದ್ಯ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗುತ್ತದೆ. ಈ ವೇಳೆ ದೇವರ ಮೇಲೆ ಚಿಲ್ಲರೆ (ನಾಣ್ಯ) ತೂರುತ್ತಾರೆ. ಈ ಎಲ್ಲ ಆಚರಣೆಗಳಿಂದ ಶೂನ್ಯಮಾಸದ ದೋಷ ನಿವಾರಣೆ ಆಗುತ್ತದೆ. ಗ್ರಾಮದ ಜನರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.
ಮೊಲ ಮರಳಿ ಕಾಡಿಗೆ:ಮೆರವಣಿಗೆ ಮುಗಿದ ನಂತರ ಸಂಜೆ ಮೊಲವನ್ನು ಕಾಡಿಗೆ ಬಿಡುತ್ತಾರೆ. ಈ ಆಚರಣೆಯಲ್ಲಿರುವ ಒಂದು ನಿಯಮ ಏನೆಂದರೆ, ಮೊಲ ಹಿಡಿಯುವಾಗ, ಮೆರವಣಿಗೆಯೂ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಈ ಹಬ್ಬದಲ್ಲಿ ಪೂಜೆ ಮಾಡಿರುವ ಮೊಲವನ್ನು ಯಾರೂ ಕೊಲ್ಲುವಂತಿಲ್ಲ. ಇದೇ ಕಾರಣಕ್ಕೇ ಮೊಲಕ್ಕೆ ಕಿವಿಯೋಲೆ ಹಾಕುತ್ತೇವೆ ಎಂದು ಕಿವಿ ಚುಚ್ಚುವ ಹಿಂದಿನ ಉದ್ದೇಶ ವಿವರಿಸುತ್ತಾರೆ ಗ್ರಾಮಸ್ಥರು.
ಈ ಕುರಿತು ಹಿರಿಯ ಪ್ರಧಾನ ಅರ್ಚಕ ಡಿ.ಪರಶುರಾಮಪ್ಪ ಮಾತನಾಡಿ, ಸಂಜೆ ಅಲಂಕೃತ ಕಂಚೀವರದರಾಜಸ್ವಾಮಿಯ ರಾಜಬೀದಿ ಮೆರವಣಿಗೆಯೊಂದಿಗೆ ಮೊಲವನ್ನು ಗ್ರಾಮದ ಊರ ಬಾಗಿಲಿಗೆ ತರಲಾಯಿತು. ಅಲ್ಲಿ ಮೊಲಕ್ಕೆ ಸ್ನಾನ ಮಾಡಿಸಿ ನಾಮಧಾರಣೆ ಮಾಡಲಾಯಿತು. ಅದರ ಕಿವಿಚುಚ್ಚಿ ಕಿವಿಯೋಲೆ ಹಾಕಲಾಯಿತು. ಹೂವುಗಳಿಂದ ಸಿಂಗಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಂಚೀವರದರಾಜ ಸ್ವಾಮಿಯ ಶೂನ್ಯ ಮಾಸದ ದೋಷ ನಿವಾರಣೆಯಾಗಲಿ, ಗ್ರಾಮದ ಜನ ಹಾಗೂ ಜಾನುವಾರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ, ಮೊಲವನ್ನು ಕಂಚೀವರದರಾಜ ಸ್ವಾಮಿಗೆ ಮೂರು ಸಲ ನೀವಾಳಿಸಲಾಯಿತು. ನಂತರದಲ್ಲಿ ಮೊಲವನ್ನು ಮರಳಿ ಕಾಡಿಗೆ ಬಿಡಲಾಯಿತು ಎಂದು ತಿಳಿಸಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ- ವಿಡಿಯೋ