ಚಿತ್ರದುರ್ಗ:ಕೇಂದ್ರ ಸರ್ಕಾರ ನೀಡುವ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗೆ ಭಾಜನರಾಗಿರುವ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ವಾಸಿಂ ಅವರನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸನ್ಮಾನಿಸಿದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದಲ್ಲಿ ಇಂದು ಮುಖ್ಯಾಧಿಕಾರಿ ವಾಸಿಂ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಬಳಿಕ ಶ್ರೀಗಳು ಮಾತನಾಡಿ, ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ಪ್ರಶಸ್ತಿ ಬಂದಿರುವುದು ಸಂತಸದ ವಿಷಯವಾಗಿದೆ. ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಣೆ ಮಾಡಿದಕ್ಕೆ ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ ಎಂದು ಪ್ರಶಂಸಿಸಿದರು.
ಸ್ವಚ್ಛತೆ ಮಾನವ ಜೀವನದ ಅತ್ಯಂತ ಪ್ರಮುಖ ವಿಷಯವಾಗಿದೆ. ಸ್ವಚ್ಛತೆ ಇದ್ದಲ್ಲಿ ಆರೋಗ್ಯ, ಮನಸ್ಸಿಗೆ ಆಹ್ಲಾದವಿರುತ್ತದೆ. ಹೊಳಲ್ಕೆರೆ ಪಟ್ಟಣವನ್ನು ಇನ್ನಷ್ಟು ಸುಂದರಗೊಳಿಸಿ ಸ್ಥಳ ಲಭ್ಯವಿರುವ ಕಡೆ ಗಿಡಮರಗಳನ್ನು ಬೆಳೆಸಿ ಎಂದು ಸಲಹೆ ನೀಡಿದರು.