ಚಿತ್ರದುರ್ಗ:ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಸರ್ಕಾರದ ಆದೇಶಾನುಸಾರವಾಗಿ ಚಳ್ಳಕೆರೆಯ ವೇದಾವತಿ ನದಿಗೆ ನೀರು ಹರಿಸಲಾಗಿದ್ದರು, ವಿವಿಸಾಗರಕ್ಕೆ ಭೇಟಿ ನೀಡಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ನೀರನ್ನು ನಿಲ್ಲಿಸಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್ ಸೇರಿದ್ದಂತೆ ಬೆಂಬಲಿಗರನ್ನು ಬಂಧಿಸುವಂತೆ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿವಿ ಸಾಗರದಿಂದ ಸರ್ಕಾರದ ಆದೇಶದ ಮೇರೆಗೆ ಚಳ್ಳಕೆರೆಗೆ ನೀರು ಹರಿಸಲಾಗಿತ್ತು. ಇದನ್ನು ವಿರೋಧಿಸಿ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪ್ರತಿಭಟನೆ ನಡೆಸಿ ನೀರು ಹರಿಯುವುದನ್ನು ತಡೆದಿದ್ದರು.
ಅಲ್ಲದೆ ಈ ವೇಳೆ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರಿಗೆ ಮನವಿ ಮಾಡಿದರು. ಈಗಾಗಲೇ ಚಳ್ಳಕೆರೆಯ ವೇದಾವತಿ ನದಿ ದಡದಲ್ಲಿರುವ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ 0.25 ಟಿಎಂಸಿ ನೀರನ್ನು ಸರ್ಕಾರದ ಆದೇಶಾನುಸಾರವಾಗಿ ಹರಿಸಲು ಸ್ವತಃ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೋಳಿಯವರೇ ಚಾಲನೆ ನೀಡಿದ್ದರು.
ಅದ್ರೇ ಸೋಮವಾರ ಸಂಜೆ ಗುಂಪು ಕಟ್ಟಿಕೊಂಡು ವಿವಿ ಸಾಗರಕ್ಕೆ ತೆರಳಿದ ಶಾಸಕಿ ಪೂರ್ಣಿಮಾ ನೀರು ತಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.