ಚಿತ್ರದುರ್ಗ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ 2 ಲಕ್ಷ ರೂ. ಕೃಷಿ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದು ಹಳೆ ಮಾತು. ಆದರೆ, ಇದೀಗ ಬ್ಯಾಂಕ್ ಅಧಿಕಾರಿಗಳ ಕುತಂತ್ರದಿಂದ ರೈತರು ಗೊಂದಲಕ್ಕೊಳಗಾಗಿದ್ದು ಅಡಕತ್ತರಿಯಲ್ಲಿ ಸಿಲಿಕಿದ್ದಾರೆ.
ಹಣ ಡ್ರಾ ಮಾಡ್ಕೊಳ್ಳಿ ಅಂದ್ರು: ಪಡೆದ ಹಣ ಮತ್ತೆ ಕಟ್ಟಿಕೊಂಡ್ರು..! - CM HDK
ಅನ್ನದಾತರ ಆತ್ಮಹತ್ಯೆ ತಡೆಯಬೇಕೆಂಬ ಮಹದಾಸೆಯಿಂದ ಸಿಎಂ ಕುಮಾರಸ್ವಾಮಿ ರೈತರ ಕೃಷಿ ಸಾಲ ಮನ್ನಾ ಮಾಡಿ ಆದೇಶ ಕೊಟ್ಟಿದ್ದು ನಿಜ. ಆದ್ರೆ, ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದ ಕೆಲವು ರೈತರು ತೊಂದರೆಗೊಳಗಾಗಿದ್ದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನಗರದ ಕೆಲ ರೈತರು ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಾಲ ಮನ್ನಾ ಘೋಷಣೆ ಬಳಿಕ ಸರ್ಕಾರ ಹಂತ ಹಂತವಾಗಿ ಬ್ಯಾಂಕುಗಳಿಗೆ ಹಣ ಮಂಜೂರು ಮಾಡುತ್ತಿರುವುದು ಸತ್ಯ. ಆದ್ರೆ ಆ ಹಣವನ್ನು ರೈತರ ಕೃಷಿ ಸಾಲಕ್ಕೆ ಜಮೆ ಮಾಡಿಕೊಳ್ಳಬೇಕಾದ ಬ್ಯಾಂಕ್ ಅಧಿಕಾರಿಗಳು, ರೈತರಿಗೆ ಕರೆ ಮಾಡಿ ಸರ್ಕಾರದಿಂದ ಬಂದ ಹಣವನ್ನು ಡ್ರಾ ಮಾಡಿಕೊಳ್ಳುವಂತೆ ತಿಳಿಸುತ್ತಿದ್ದಾರೆ.
ಹಣ ಜಮೆ ಆಗಿದ್ದನ್ನು ಪರಿಶೀಲಿಸಿದಾಗ ಖಾತೆಯಲ್ಲಿ ಹಣವೇ ಕಾಣುತ್ತಿಲ್ಲ. ಕೇಳಿದರೆ ಸರ್ಕಾರ ಹಣವನ್ನು ವಾಪಸ್ ತೆಗೆದುಕೊಂಡಿದೆ. ನೀವು ಪಡೆದ ಹಣವನ್ನು ಬಡ್ಡಿ ಸಮೇತ ವಾಪಸ್ ಕಟ್ಟಿ ಎಂದು ಬ್ಯಾಂಕ್ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ ಎಂದು ಚಿಕ್ಕಬೆನ್ನೂರು ರೈತ ಮಂಜುನಾಥ್ ತಮಗೊದಗಿಬಂದ ಸಂಕಷ್ಟದ ಬಗ್ಗೆ ಮಾಧ್ಯಮದ ಮುಂದೆ ಸಮಸ್ಯೆ ಹೇಳಿಕೊಂಡಿದ್ದಾರೆ.