ಚಿತ್ರದುರ್ಗ: ಪ್ರತಿಯೊಂದು ರಾಜ್ಯವೂ ತನ್ನ ಭಾಷೆಯನ್ನು ಬಳಸುವ ಹಕ್ಕನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಅವರ ರಾಜ್ಯದ ಭಾಷೆಯಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅವರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಚಿತ್ರದುರ್ಗದಲ್ಲಿ ನಿರುದ್ಯೋಗ ಮತ್ತು ಸಂಬಂಧಿತ ಸಮಸ್ಯೆಗಳ ಕುರಿತು ರಾಜ್ಯದ ಸುಮಾರು 1,800 ಯುವಕರೊಂದಿಗೆ ಸಂವಾದ ನಡೆಸಿದ ವೇಳೆ ಒಂದು ಭಾಷೆ ಸಂಭಾಷಣೆಗೆ ಬಳಸುವುದಕ್ಕಿಂತ ಹೆಚ್ಚಿನದ್ದಾಗಿದೆ. ಭಾಷೆಯಲ್ಲಿ ಭರವಸೆ ಇದೆ, ಕಲ್ಪನೆಯಿದೆ. ಭಾಷೆಯಲ್ಲಿ ಇತಿಹಾಸವಿದೆ ಎಂದು ಪ್ರತಿಪಾದಿಸಿದರು.
ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮ ಹಿಂದಿ ಮತ್ತು ದೇಶದ ಇತರ ಭಾಗಗಳಲ್ಲಿ ಆಯಾ ಸ್ಥಳೀಯ ಭಾಷೆಯಾಗಿರಬೇಕು ಎಂಬ ಸಂಸದೀಯ ಸಮಿತಿಯ ಇತ್ತೀಚಿನ ಶಿಫಾರಸಿನ ವಿವಾದದ ನಡುವೆ ರಾಹುಲ್ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಇಂಗ್ಲಿಷ್ ಬಳಕೆ ಐಚ್ಛಿಕವಾಗಿರಬೇಕು ಎಂದು ತಿಳಿಸಿದ್ದಾರೆ.
ಹಿಂದಿಯನ್ನು ಹೆಚ್ಚು ಮಾತನಾಡದ ದಕ್ಷಿಣ ರಾಜ್ಯಗಳಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಂತಹ ಹಲವಾರು ರಾಜಕೀಯ ನಾಯಕರು ಸಂಸದೀಯ ಸಮಿತಿಯ ಶಿಫಾರಸಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ತೀರ್ಮಾನ ಹಿಂದಿ ಹೇರಿಕೆಯ ತಂತ್ರ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ನಾಲ್ಕು ಕಿಮೀ ಎಡವದೇ ನಡೆದುಕೊಂಡು ಹೋಗಿ: ಬಿಜೆಪಿ ಯಾತ್ರೆಗೆ ಸಿದ್ದರಾಮಯ್ಯ ಸವಾಲು