ಕರ್ನಾಟಕ

karnataka

ETV Bharat / state

ಮೂಲ ಸೌಕರ್ಯ ಕೊರತೆಯ ಜೊತೆಗೆ ದೆವ್ವದ ಕಾಟವೆಂದು ಕೋಟೆನಾಡಿನ ಗ್ರಾಮಸ್ಥರ ವಲಸೆ! - infrastructure problem at Chikobanahalli village

ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಭೋವಿ ಸಮುದಾಯಕ್ಕೆ ಹಲವು ವರ್ಷಗಳಿಂದ ಮೂಲ ಸೌಲಭ್ಯ ಒದಗಿಸಿಲ್ಲ.ಇತ್ತ ದುಡಿಮೆ ಮಾಡಲು ಗೇಣು ಭೂಮಿಯಿಲ್ಲ.‌ ಹೀಗಾಗಿಯೇ ಚಿಕ್ಕೋಬನಹಳ್ಳಿ ಗ್ರಾಮದ 30 ಕುಟುಂಬಗಳು ದುಡಿಮೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ವಾಸ ಸ್ಥಳ ತೊರೆದು ಊರೂರು ಸುತ್ತಿ ಜೀವನ ನಡೆಸುವಂತಾಗಿದೆ.

lack-of-basic-infrastructure-for-chikobanahalli-village-of-moolakalum-taluk
ವಲಸೆಗೆ ಮುಂದಾದ ಗ್ರಾಮಸ್ಥರು

By

Published : Jan 8, 2021, 8:40 PM IST

Updated : Jan 8, 2021, 8:53 PM IST

ಚಿತ್ರದುರ್ಗ: ಕೋಟಿ ಊರು ಸುತ್ತಿದರೇನು? ನಮ್ಮೂರೆ ನಮ್ಗೆ ಮೇಲು ಎಂಬ ಗಾದೆ ಮಾತಿದೆ. ಆದ್ರೆ ಕೋಟೆನಾಡಿನ ಆ ಒಂದು ಗ್ರಾಮ ಮಾತ್ರ ಜಿಲ್ಲಾಡಳಿತದ ದಿವ್ಯನಿರ್ಲಕ್ಷ್ಯದಿಂದ ಸೊರಗಿದೆ. ಅಲೆಮಾರಿ ಜನಾಂಗ ವಾಸವಿರುವ ಆ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಕುಟುಂಬ ನಿರ್ವಹಣೆಗಾಗಿ ಜನರು ವಲಸೆ ಹೋಗುವಂತಾಗಿದೆ.

ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಭೋವಿ ಸಮುದಾಯಕ್ಕೆ ಹಲವು ವರ್ಷಗಳಿಂದ ಮೂಲ ಸೌಲಭ್ಯ ಒದಗಿಸಿಲ್ಲ. ಇತ್ತ ದುಡಿಮೆ ಮಾಡಲು ಗೇಣು ಭೂಮಿಯೂ ಇಲ್ಲ. ‌ಹೀಗಾಗಿಯೇ ಚಿಕ್ಕೋಬನಹಳ್ಳಿ ಗ್ರಾಮದ 30 ಕುಟುಂಬಗಳು ದುಡಿಮೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ವಾಸಸ್ಥಳ ತೊರೆದು ಊರೂರು ಸುತ್ತಿ ಜೀವನ ನಡೆಸುತ್ತಿವೆ.

ಮೂಲ ಸೌಕರ್ಯಗಳ ಸಮಸ್ಯೆ ಕುರಿತು ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ

ಮೂಲ ಸೌಕರ್ಯಗಳನ್ನೇ ಕಾಣದ ಗ್ರಾಮ

ಚಿಕ್ಕೋಬನಹಳ್ಳಿ ಗ್ರಾಮಕ್ಕೆ ಕಳೆದ ಹಲವು ವರ್ಷಗಳಿಂದ ಅಧಿಕಾರಿಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಿಲ್ಲವಂತೆ. ಅಲ್ಲದೆ ಸರ್ಕಾರ ಕಲ್ಲು ಒಡೆಯುವ ಕೆಲಸಕ್ಕೆ ಬ್ರೇಕ್ ಹಾಕಿದ ಪರಿಣಾಮ ಗ್ರಾಮದ ಸುಮಾರು 30 ಕುಟುಂಬಸ್ಥರು ಅನಿವಾರ್ಯತೆಯಿಂದ ಮನೆ ತೊರೆದು ದುಡಿಮೆಗೆ ಹೊರಟಿದ್ದಾರೆ.

ಮೌಢ್ಯಕ್ಕೆ ಕಿವಿಗೊಟ್ಟ ಜನ
ಗ್ರಾಮದಲ್ಲಿ ಸರಣಿ ಸಾವುಗಳಾಗಿವೆಯಂತೆ. ಹೀಗಾಗಿ, ಊರಲ್ಲಿ ದೆವ್ವದ ಕಾಟವೂ ಇದೆ ಎಂದು ಗಾಳಿ ಸುದ್ದಿ ಹಬ್ಬಿಸಲಾಗಿದೆ ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಮೌಢ್ಯದ ಮಾತಿಗೆ ಮರುಳಾದ ಸುಮಾರು 10 ಕ್ಕೂ ಅಧಿಕ ಕುಟುಂಬಸ್ಥರು ಚಿಕ್ಕೋಬನಹಳ್ಳಿ ಗ್ರಾಮ ತೊರೆದು ಪಕ್ಕದ ಹೊಸೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಕೆಲವರು ಸರ್ಕಾರಿ ಗೋಮಾಳ ಜಾಗದಲ್ಲಿ ವಾಸವಾಗಿದ್ದಾರೆ. ಗ್ರಾಮ ಭೋವಿ ಸಮುದಾಯದ ಜನರು ಹೆಚ್ಚಾಗಿ ಅನಕ್ಷರಸ್ಥರಾಗಿದ್ದ ಕಾರಣ ಗಾಳಿ ಸುದ್ದಿಗೆ ಮರುಳಾಗಿದ್ದಾರೆ ಎನ್ನುವ ಮಾತು ಕೇಳಿ ಬರ್ತಿವೆ.

ತಲೆತಲಾಂತರದ ವೃತ್ತಿಗೆ ಸರ್ಕಾರ ಕಂಟಕ

ಪೂರ್ವಜರ ಕಾಲದಿಂದ ಕಲ್ಲು ಒಡೆಯುವ ಕಾಯಕ ಮಾಡಿಕೊಂಡು ಬಂದ ಭೋವಿ ಸಮುದಾಯದ ಕುಟುಂಬಗಳಿಗೆ, ಸರ್ಕಾರ ಕಲ್ಲು ಒಡೆಯದಂತೆ ನಿರ್ಬಂಧ ಹೇರಿದೆಯಂತೆ. ದುಡಿಮೆ ಇಲ್ಲದೆ ಅನಿವಾರ್ಯ ಕಾರಣಗಳಿಂದ ಜನರು ಮನೆ ತೊರೆಯುವಂತಾಗಿದೆ. ಸರ್ಕಾರ ಚಿಕ್ಕೋಬನಹಳ್ಳಿ ಗ್ರಾಮದ ಭೋವಿ ಕುಟುಂಬಸ್ಥರಿಗೆ ಉದ್ಯೋಗ ಒದಗಿಸುವಂತೆ ಸಮುದಾಯದ ಯುವಕರು ಒತ್ತಾಯಿಸುತ್ತಿದ್ದಾರೆ.

ಏನ್ಮಾಡ್ಮೇಕು ಜಿಲ್ಲಾಡಳಿತ?
ಗಾಳಿ ಸುದ್ದಿಗೆ ಹಾಗೂ ಉದ್ಯೋಗಕ್ಕಾಗಿ ಅಲೆಮಾರಿಯಾಗಿ ವರ್ಷವಿಡೀ ದೂರವಿರುವ ಭೋವಿ ಜನರಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು. ಇತ್ತ ಗಾಳಿ ಮಾತಿಗೆ ಮರುಳಾದ ಜನಗಳಿಗೆ ಜಾಗೃತಿ ಮೂಡಿಸಿ, ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿದ್ರೆ ಮಾತ್ರ ಜನರ ಆತಂಕ ದೂರವಾಗಲು ಸಾಧ್ಯ.

ಓದಿ:ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

Last Updated : Jan 8, 2021, 8:53 PM IST

For All Latest Updates

TAGGED:

ABOUT THE AUTHOR

...view details