ಚಿತ್ರದುರ್ಗ :ಜಿಲ್ಲೆಯ ಹಿರಿಯೂರು ತಾಲೂಕಿನ ಕಳವಿಭಾವಿ ಗ್ರಾಮದ ಜೀವನ್ಗೌಡ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ. ಜೀವನ್ಗೌಡ ಅವರ ಕುಟುಂಬದಲ್ಲಿ ಕಡುಬಡತನ. ಇವರಿಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಬದುಕಿನ ಜಂಜಾಟದಲ್ಲಿ ಏನಾದರೂ ಮಾಡಿ ಸಾಧನೆ ಮಾಡಬೇಕೆಂಬ ಹಂಬಲ.
ಸಾಧನೆಗೆಂದು 17 ವರ್ಷದ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ತೊಡಗಿದ್ದಾರೆ. ಮೊದ ಮೊದಲಿಗೆ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಟೀ, ಕಾಫಿ ಕೊಡುವುದು, ಪಿಎ ಆಗಿ ಕೆಲಸ, ಫೋಟೋಗ್ರಾಫರ್ ಆಗಿ ಕೊನೆಗೆ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಚಿತ್ರರಂಗದ ಬದುಕು ನನ್ನ ಬೆಳವಣಿಗೆಯನ್ನ ನಾನೇ ಹಿಂತಿರುಗಿ ನೋಡುವಂತೆ ಮಾಡಿದೆ ಎನ್ನುತ್ತಾರೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಜೀವನ್ ಗೌಡ.
ಕೇರಳದ 7ನೇ ಆರ್ಟ್ ಇಂಡಿಪೆಂಡೆಂಟ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತಾರಾಷ್ಟ್ರೀಯ ಫೀಲ್ಡ್ ಫೆಸ್ಟಿವಲ್ನಲ್ಲಿ ಅನಿರೀಕ್ಷಿತ ಚಿತ್ರದ 'ಅತ್ಯುತ್ತಮ ಛಾಯಾಗ್ರಾಹಕ'ನೆಂದು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಹಳೆಯ ಸೋರುತ್ತಿದ್ದ ಮಾಳಿಗೆ ಮನೆಯಲ್ಲಿ ವಾಸ. ಸಗಣಿಯಿಂದ ಸಾರಿಸುವ ನೆಲ. ತಂದೆ ತಾಯಿ ಕೃಷಿಯಲ್ಲಿ ಎಷ್ಟು ಕೆಲಸ ಮಾಡಿದರೂ ಸರಿಯಾಗಿ ಲಾಭ ಸಿಗುತ್ತಿರಲಿಲ್ಲ. ಕುಟುಂಬದಲ್ಲಿ ಕಡು ಬಡತನ, ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಮನೆಗೆ ಯಾರಾದರೂ ಬಂದರೆ ಕುಳಿತುಕೊಳ್ಳಲು ಒಂದು ಚೇರ್ ಕೂಡ ಇರಲಿಲ್ಲ.
ಪಕ್ಕದ ಮನೆಯಲ್ಲಿ ಮಿಕ್ಸಿ ಗ್ರೇಂಡರ್ ಇತ್ತು. ನಮ್ಮ ಮನೆಯಲ್ಲಿ ಇದೆಲ್ಲ ಯಾವಾಗ ಬರುತ್ತದೆ? ಎಂಬ ಚಿಂತೆ. ಅಂತದ್ರಲ್ಲಿ ಏನಾದರೂ ಮಾಡಿ ಸಾಧಿಸಬೇಕು. ಓದೋಣ ಎಂದರೆ ತಲೆಗೆ ವಿದ್ಯೆ ಹತ್ತಲಿಲ್ಲ. ಹಾಗಾಗಿ, ಪಿಯುಸಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದೆ.
ಗುರಿ ಸಾಧನೆಗೆ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ. ತಾಳ್ಮೆಯಿಂದ ಚಿತ್ರರಂಗದಲ್ಲಿ ಕೆಲಸ ಮಾಡಿಕೊಂಡು ಇದ್ದಿದ್ದಕ್ಕೆ ನನಗೆ ಇಂದು ಚಿತ್ರೋದ್ಯಮ ಕೈ ಹಿಡಿದಿದೆ. ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದಿದ್ದಾರೆ.