ಚಿತ್ರದುರ್ಗ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಶಾಲಿಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನ ಜನಸೇವಕ ಸಮಾವೇಶದಲ್ಲಿ ಅಭಿನಂದಿಸಲಾಯಿತು. ಕೋಟೆನಾಡಿನ ರೆಡ್ಡಿ ಸಮುದಾಯ ಭವನದಲ್ಲಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಚಾಲನೆ ನೀಡಿದರು.
ಜನಸೇವಕ ಸಮಾವೇಶಕ್ಕೆ ಜಿಲ್ಲೆಯ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಗಳಿಸಿದ ಸದಸ್ಯರು ಆಗಮಿಸಿದ್ದರು. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು, ಜಿಲ್ಲೆಯ ಮುಖಂಡರು, ಜಯಗಳಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಸಚಿವರ ಕಿಡಿ:
ಸಮಾವೇಶಕ್ಕೆ ಆಗಮಿಸಿದ್ದ ಸಚಿವರು ಕಾರ್ಯಕ್ರಮದುದ್ದಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಸಚಿವ ಬಸವರಾಜ್ ಬೊಮ್ಮಾಯಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕಕ್ಕೆ ಭಾಗ್ಯಗಳ ದೌರ್ಭಾಗ್ಯ ಕಾಂಗ್ರೆಸ್ ಸರ್ಕಾರ ಕೊಡುಗೆ ನೀಡಿದೆ ಎಂದರು.
ಕುಡಿಯುವ ನೀರಿನ ಘಟಕ, ಗ್ರಾಮ ವಿಕಾಸ ಯೋಜನೆ ವಿಫಲವಾಗಿವೆ. ಬಿಎಸ್‌ವೈ ನೇತೃತ್ವದ ಸರ್ಕಾರ ಗ್ರಾಮ ವಿಕಾಸಕ್ಕೆ ಚಾಲನೆ ನೀಡಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಬೇರೆ ಬೇರೆ ದಿಕ್ಕಿನಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷ ಅದ್ಯಾವಾಗ ಕುಸಿದು ಬೀಳತ್ತೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಜಿಲ್ಲೆಗೆ ನೀರು ಹರಿಸುತ್ತೇವೆ ಎಂದು ಜನತೆಗೆ ಭರವಸೆಯನ್ನು ಮಾತ್ರ ನೀಡಿತು. ಬಿಎಸ್‌ವೈ ಅಧಿಕಾರಕ್ಕೆ ಬರುತ್ತಿದ್ದಂತೆ ಚಿತ್ರದುರ್ಗ ಹಾಗೂ ತುಮಕೂರು ಭಾಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಿದೆ. ಎರಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸರ್ಕಾರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ದೇಶದ ಜನರು ರಾಮಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದರು.