ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ), ಡಿಆರ್ಡಿಒ ಮತ್ತು ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಇಂದು (ಭಾನುವಾರ) ಮುಂಜಾನೆ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾದ ಸ್ವತಂತ್ರ ಲ್ಯಾಂಡಿಂಗ್ ಮಿಷನ್ (RLV LEX) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
"ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಯು ಬೆಳಗ್ಗೆ 7:10 ಕ್ಕೆ ಟೇಕ್ ಆಫ್ ಆಯಿತು. ಬಳಿಕ, 4.5 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಿತು. ಆರ್‌ಎಲ್‌ವಿಯ ಮಿಷನ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಕಮಾಂಡ್‌ನ ಆಧಾರದ ಮೇಲೆ ಪೂರ್ವನಿರ್ಧರಿತವಾದಂತೆ ಆರ್‌ಎಲ್‌ವಿ 4.6 ಕಿಮೀ ಕಡಿಮೆ ವ್ಯಾಪ್ತಿಯಲ್ಲಿ ಮಧ್ಯ ಗಾಳಿಯನ್ನು ಬಿಡುಗಡೆ ಮಾಡಿದೆ. ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಂ ಅನ್ನು ಬಳಸಿಕೊಂಡು ಅಪ್ರೋಚ್ ಮತ್ತು ಲ್ಯಾಂಡಿಂಗ್ ಮಾಡಲಾಯಿತು. ಬೆಳಗ್ಗೆ 7:40 ಕ್ಕೆ ಲ್ಯಾಂಡಿಂಗ್ ಆಗಿದ್ದು, ಏರ್‌ಸ್ಟ್ರಿಪ್‌ನಲ್ಲಿ ಸ್ವತಂತ್ರ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು" ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ :ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ
RLV-TD ಯ ಸಂರಚನೆಯು ವಿಮಾನದಂತೆಯೇ ಇರುತ್ತದೆ. ಹೆಲಿಕಾಪ್ಟರ್ ಮೂಲಕ 4.5 ಕಿ.ಮೀ ಎತ್ತರಕ್ಕೆ (winged body) 'ರೆಕ್ಕೆಯ ದೇಹ'ವನ್ನು ಸಾಗಿಸಿ ರನ್‌ವೇಯಲ್ಲಿ ಸ್ವತಂತ್ರವಾಗಿ ಲ್ಯಾಂಡಿಂಗ್ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.