ಚಿತ್ರದುರ್ಗ:ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿದ್ದು, ಮಳೆ ಇಲ್ಲದೆ ರೈತರು ತರಕಾರಿಗಳನ್ನು ಬೆಳೆಯಲು ಹಿಂಜರಿಯುತ್ತಿದ್ದಾರೆ. ಆದರೆ ಅವಶ್ಯಕವಾಗಿರುವ ತರಕಾರಿಯನ್ನು ನೆರೆಯ ದಾವಣಗೆರೆ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಿಂದ ದಳ್ಳಾಳಿಗಳು ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ತರಕಾರಿಗಳ ಬೆಲೆ ಹೆಚ್ಚಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಬರಗಾಲದಿಂದ ಬಳಲುತ್ತಿರುವ ಕೋಟೆನಾಡಿನಲ್ಲಿ ಈ ಬಾರಿ ಕೂಡ ಮಳೆ ಕಡಿಮೆಯಾಗಿದ್ದು, ರೈತರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಈರುಳ್ಳಿ, ಶೇಂಗಾ, ಕಡಲೆ ಬೆಳೆಗಳಲ್ಲಿ ಇಳುವರಿ ಗಣನೀಯವಾಗಿ ಇಳಿಮುಖವಾಗಿದೆ.
ತರಕಾರಿಗಳಲ್ಲಿ ಕೆಜಿ ಬೀನ್ಸ್ 120 ರಿಂದ 130 ರೂ, ಟೊಮ್ಯಾಟೊ 30 ರಿಂದ 40, ಮೆಣಸಿನ ಕಾಯಿ ಕೂಡ 60 ರಿಂದ 70 ರೂ ಬೆಲೆ ಇದ್ದು, ಗ್ರಾಹಕರು ಸುಸ್ತಾಗಿದ್ದಾರೆ. ಕ್ಯಾರೆಟ್ ಇಳುವರಿಗೂ ಹೊಡೆತ ಬಿದ್ದಿದ್ದು ಕೆಜಿಗೆ 20 ರಿಂದ 35 ರೂ ಇದೆ. ಹಾಗಲ ಕಾಯಿ, ಹೀರೆ ಕಾಯಿ ಬೆಲೆಯಲ್ಲೂ ಏರಿಕೆಯಾಗಿದೆ. ಇನ್ನೂ ಬದನೆ ಕಾಯಿ, ನವಿಲು ಕೋಸು, ಎಲೆ ಕೋಸು, ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ ಎನ್ನುತ್ತಾರೆ ತರಕಾರಿ ಮಾರಾಟಗಾರರಾದ ಮಧು.
ಸೊಪ್ಪು ಪ್ರಿಯರಿಗೆ ಶಾಕ್
ತರಕಾರಿಗಳ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಸೊಪ್ಪುಗಳ ಬೆಲೆಯಲ್ಲೂ ಏರುಪೇರಾಗಿದ್ದು, ದುಬಾರಿಯಾಗಿದೆ. ಅರಿವೆ, ಪಾಲಕ್, ಚಕ್ಕೋತಾ, ಸಬ್ಬಸಿಗೆ, ಮೆಂತೆ, ಕೀರೆ ಹೀಗೆ ಯಾವುದೇ ಸೊಪ್ಪು ಕೊಂಡರೂ ಒಂದು ಕಟ್ಟಿಗೆ 30 ರಿಂದ 40 ರೂಪಾಯಿಗಿಂತ ಕಡಿಮೆ ಇಲ್ಲ. ಕೊತ್ತಂಬರಿ ಸೊಪ್ಪು ಕೂಡ ಒಂದು ಕಟ್ಟಿಗೆ 50-60 ರೂಪಾಯಿ ಇದೆ.