ಚಿತ್ರದುರ್ಗ:ಯಾರೇ ಸಾವಿಗೀಡಾದರೂ ಗ್ರಾಮದ ಹೊರ ಭಾಗದಲ್ಲಿರುವ ಸ್ಮಶಾನದಲ್ಲಿ ಹೂಳುವ ಪದ್ಧತಿಯಿದೆ. ಆದರೆ ಜಿಲ್ಲೆಯಲ್ಲಿರುವ ಈ ಗ್ರಾಮದಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ವಿಶಿಷ್ಟ ಆಚರಣೆ ಕಂಡು ಬಂದಿದೆ.
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಾಡುಸಿದ್ದೇಶ್ವರ ಗ್ರಾಮದಲ್ಲಿ ಯಾರೇ ಸಾವಿಗೀಡಾದ್ರು ಗ್ರಾಮದ ಹೊರವಲಯದ ಸ್ಮಶಾನ ಅಥವಾ ಜಮೀನುಗಳಲ್ಲಿ ಅಂತ್ಯಸಂಸ್ಕಾರ ಮಾಡುವ ಬದಲಿಗೆ ಒಂದೇ ಸಮಾಧಿಯಲ್ಲಿ ಇಲ್ಲಿ ಜನ ಅಂತ್ಯಸಂಸ್ಕಾರ ಮಾಡಿಕೊಂಡು ಬಂದಿದ್ದಾರಂತೆ. ಕಾಡುಸಿದ್ದೇಶ್ವರ ಗ್ರಾಮದಲ್ಲಿರುವ ಕಾಡಕುರುಬ ಜನಾಂಗವು ಈ ರೀತಿಯ ವಿಶಿಷ್ಟ ಆಚರಣೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಇಲ್ಲಿಯವರೆಗೆ ಮೃತಪಟ್ಟ ಜನರ ಮೃತದೇಹಗಳನ್ನು ಒಂದೇ ಸಮಾಧಿಯಲ್ಲಿ ಹಾಕಲಾಗಿದೆಯಂತೆ.
ಯಾರೇ ಸತ್ರೂ ಒಂದೇ ಸಮಾಧಿಯಲ್ಲಿ ಸಂಸ್ಕಾರ ಇಂದಿನ ಆಧುನಿಕ ಕಾಲದಲ್ಲಿಯೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಕಾಡು ಕುರುಬ ಸಮುದಾಯದ ವಂಶದಲ್ಲಿ ಸಾವಿಗೀಡಾದರೆ ಮಾತ್ರ ಇಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶವಿದೆ. ಇವರನ್ನು ಹೊರತುಪಡಿಸಿ ಬೇರೆ ಸಮುದಾಯದವರು ಸಾವಿಗೀಡಾದರೆ, ಕಾಡುಸಿದ್ದೇಶ್ವರ ಗ್ರಾಮದಿಂದ ಬೇರೆ ಕಡೆ ಮದುವೆ ಮಾಡಿಕೊಟ್ಟಂತಹ ಹೆಣ್ಣು ಮಕ್ಕಳಿಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ಸಾವನಪ್ಪಿದ್ರೆ, ಅಪಘಾತವಾಗಿ ಸಾವಿಗೀಡಾದವರಿಗೆ ಈ ಸಮಾಧಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಇಲ್ಲವಂತೆ.
ಕಾಡುಸಿದ್ದೇಶ್ವರ ಗ್ರಾಮದಲ್ಲಿರುವ ಸಮಾಧಿ ಇನ್ನು ಊರಿನ ಹೊರಗೆ ಸಾವನಪ್ಪಿದ ವ್ಯಕ್ತಿಗಳಿಗೂ ಕೂಡ ಸಮಾಧಿಯಲ್ಲಿ ಹೂಳುವುದಿಲ್ಲ. ಒಂದು ಅಂದಾಜಿನ ಪ್ರಕಾರ ಸಾವಿರಾರು ಮೃತದೇಹಗಳನ್ನು ಒಂದೇ ಗುಂಡಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎನ್ನುವುದು ನಿಜಕ್ಕೂ ನಿಗೂಢವಾಗಿ ಉಳಿದಿದ್ದು, ಈ ಆಚರಣೆ ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆಯಂತೆ. ಈ ಆಚರಣೆಯೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಇಲ್ಲಿಗೆ ಭೇಟಿ ನೀಡುವ ಹಲವರ ಅಚ್ಚರಿ ಕಾರಣವಾಗಿದೆ.