ಚಿತ್ರದುರ್ಗ: "ನಾನು ಈ ಬಾರಿ ಲೋಕಸಭೆಯ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಬಿಜೆಪಿಯ ನಿಷ್ಠಾವಂತ ಸೇನಾನಿ" ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಚಿತ್ರದುರ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಲೋಕಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ನಾನೇ ಅಭ್ಯರ್ಥಿಯಾಗಬೇಕು, ನನ್ನ ಮಕ್ಕಳೇ ಅಭ್ಯರ್ಥಿಯಾಗಬೇಕು ಎಂದಿಲ್ಲ. ನಾನು ಎಂಪಿ ಟಿಕೆಟ್ ಆಕಾಂಕ್ಷಿ ಅಲ್ಲ. ನನ್ನ ಪಕ್ಷ ಹೇಳಿತ್ತು, ಅದಕ್ಕೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ" ಎಂದರು.
"ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದದಿಂದ ಎಂಪಿಯಾದೆ. ಅದೇ ರೀತಿ ಪಕ್ಷ ಪ್ರೀತಿಯಿಂದ ನನ್ನನ್ನು ಮಂತ್ರಿ ಮಾಡಿತು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ನನಗೆ ಆಗಲಿಲ್ಲ. ಒಬ್ಬ ಚುನಾಯಿತ ಸದಸ್ಯ ಮತದಾರರಿಗೆ ಸಿಗಬೇಕು. ಆ ರೀತಿಯ ಮನಸ್ಸು ನನ್ನಲ್ಲಿದೆ. ರಾಜ್ಯದ ಲೋಕಸಭೆಯ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿ ದಾಖಲೆ ಮಾಡುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಸಿದ್ಧವಾಗಿದ್ದಾರೆ" ಎಂದು ಹೇಳಿದರು.