ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಹಿರಿಯೂರು ನಗರ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಭಾರಿ ಮಳೆಯಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ನಗರದ ಸಿಎಂ ಬಡಾವಣೆಯ ಅಂಬೇಡ್ಕರ್ ಶಾಲೆ ಬಳಿ ಅನೇಕ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾತ್ರಿಕೇನಹಳ್ಳಿ ಚೆಕ್ ಡ್ಯಾಂ ತುಂಬಿ ಭೋರ್ಗರೆಯುತ್ತಿದ್ದರೆ ಮತ್ತೊಂದೆಡೆ, ಮದ್ದೇರು ಹಳ್ಳ ಸಹ ತುಂಬಿ ಹರಿಯುತ್ತಿದೆ. ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯಕ್ಕೆ 5,300 ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 120.60 ಅಡಿ ಇದೆ. ಇಂದು ಸಹ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ್ರೆ ವಿವಿ ಸಾಗರ ಡ್ಯಾಂಗೆ ನೀರು ಹರಿದು ಬರುವ ನಿರೀಕ್ಷೆಯಿದೆ.