ಚಿತ್ರದುರ್ಗ: ಈಗಾಗಲೇ ಸೋಂಕು ವಿಪರೀತವಾಗಿದೆ. ಎರಡು ತಿಂಗಳಿನಲ್ಲಿ ರಾಜ್ಯದಲ್ಲಿ ಸೋಂಕು ನೂರಕ್ಕೆ ನೂರರಷ್ಟು ಮತ್ತೆ ಹೆಚ್ಚಾಗುತ್ತದೆ. ಆ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಆತಂಕ ವ್ಯಕ್ತಪಡಿಸಿದರು.
ಆದರೆ ಸಾರ್ವಜನಿಕ ವಲಯದಲ್ಲಿ ಸಚಿವರ ಹೇಳಿಕೆ ಕುರಿತು ಟೀಕೆ ವ್ಯಕ್ತವಾಗುತ್ತಿದೆ. ಸಚಿವರಾಗಿ ಜನರಿಗೆ ಧೈರ್ಯ ತುಂಬುವ ಬದಲಿಗೆ ಮತ್ತಷ್ಟು ಭೀತಿ ಹುಟ್ಟಿಸುತ್ತಿದ್ದಾರೆ. ವೈರಸ್ ಹರಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ದೇವರೇ ಕಾಪಾಡಬೇಕು ಎಂದರೆ ಏನರ್ಥ ಎಂದು ಜನರು ಪ್ರಶ್ನಿಸಿದ್ದಾರೆ.
ಸಚಿವರ ನಡುವಿನ ಗೊಂದಲದಿಂದ ಸೋಂಕು ಹೆಚ್ಚಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಪ್ರತಿಪಕ್ಷದವರ ಹೇಳಿಕೆಗಳು ಸತ್ಯಕ್ಕೆ ದೂರವಾದವು. ಎರಡು ತಿಂಗಳು ಕಾಲ ಎಲ್ಲರೂ ಜಾಗೃತರಾಗಿರಬೇಕು. ಬಡವರು, ಶ್ರೀಮಂತರು ಎಂಬ ಭೇದಭಾವ ಸೋಂಕಿಗೆ ಇಲ್ಲ. ಎರಡು ತಿಂಗಳಿನಲ್ಲಿ ಸೋಂಕು ಹೆಚ್ಚಾಗಲು ನೂರಕ್ಕೆ ನೂರರಷ್ಟು ಅವಕಾಶ ಇದೆ ಎಂದರು.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ? ಆ ಭಗವಂತ ಒಬ್ಬನೇ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಬರಬೇಕು. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ನಾವೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆ, ಪ್ರಾಯಶ್ಚಿತ್ತಕ್ಕೆ ಸಿದ್ಧ. ಆದರೆ ಇತಂಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೇನೆ. ಯಾವುದೇ ವಿಚಾರ ಮಾತನಾಡುವ ವೇಳೆ ನೋಡಿ ಮಾತಾನಾಡಬೇಕು ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರ ವಿಷಯದಲ್ಲಿ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಏರ್ಪಟ್ಟಿದೆ. ಮೃತದೇಹ ಸುಡುವ ಪ್ರದೇಶಗಳು ಊರುಗಳ ನಡುವೆ ಇವೆ. ಹೀಗಾಗಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಿಬ್ಬಂದಿ ಧರಿಸಿದ್ದ ಪಿಪಿಇ ಕಿಟ್ಗಳು ನೆರೆಯ ಮನೆಗಳ ಮೇಲೆ ಬೀಳುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಈ ಸಮಸ್ಯೆ ಮರುಕಳಿಸುತ್ತಿರುವ ಕಾರಣ ಸುಡುವ ಯಂತ್ರೋಪಕರಣಗಳ ಅಳವಡಿಕೆ ಕುರಿತು ಬೆಂಗಳೂರಿನಲ್ಲಿ ಚರ್ಚೆಯಾಗಿದೆ. ಮೃತ ಸೋಂಕಿತರ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಗೊಂದಲದಲ್ಲಿದ್ದರೆ ಈ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚಿಸುತ್ತೇನೆ. ಸರ್ಕಾರದಿಂದಲೇ ಎರಡು ಎಕರೆ ಜಮೀನು ಗುರುತಿಸಿ, ಅಲ್ಲಿ ಅಂತ್ಯ ಸಂಸ್ಕಾರ ಮಾಡಬೇಕೆಂಬ ನಿರ್ಣಯ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.