ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಜನರಿಗೆ ರಾಜ್ಯ ಸರ್ಕಾರ ದೀಪಾವಳಿಗೆ ಬಂಪರ್ ಉಡುಗೊರೆ ನೀಡಿದೆ. ಈ ಹಿಂದೆ ತಡೆ ಹಿಡಿಯಲಾಗಿದ್ದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮತ್ತೊಮ್ಮೆ ಒಪ್ಪಿಗೆ ನೀಡಿದ್ದು, ಹಣ ಬಿಡುಗಡೆಗೆ ನಿರ್ಧಾರ ಕೈಗೊಂಡಿದೆ.
ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ, ಉಭಯ ಜಿಲ್ಲೆಯ ಅಭಿವೃದ್ಧಿಗೆ ಹಣಕಾಸು ನೆರವು ಕಲ್ಪಿಸುವಂತೆ ಮನವಿ ಮಾಡಿದರು. ಈ ವೇಳೆ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ 60 ಕೋಟಿ ರೂ. ಅನುದಾನ ಬಿಡುಗಡೆಗೆ ಸೂಚನೆ ನೀಡಲಾಯಿತು.
ಇಂದು 60 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದರು. ಜೊತೆಗೆ ತುಂಗಭದ್ರಾ ಹಿನ್ನೀರಿನಿಂದ 900 ಕೋಟಿ ರೂ. ವೆಚ್ಚದ ಪ್ರಾಜೆಕ್ಟ್ ಮೂಲಕ ನೀರು ತರುವ ಯೋಜನೆಗೂ ಒಪ್ಪಿಗೆ ಸೂಚಿಸಿದರು.
ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಈ ಹಿಂದೆ ತಡೆಯಲಾಗಿದ್ದ 125 ಕೋಟಿ ರೂ. ಹಣವನ್ನು ಬಳಸಿಕೊಳ್ಳಲು ಅನುಮತಿ ಕೊಡುತ್ತೇವೆ. ಹೊಸದಾಗಿ ಕೇಳಿರುವ 45 ಕೋಟಿ ರೂ. ಹಣ ಬಿಡುಗಡೆ ಸಾಧ್ಯ ಇಲ್ಲವೆಂದು ಸಿಎಂ ತಿಳಿಸಿದ್ದಾರೆ.
ಸಿಎಂ ಭೇಟಿ ನಂತರ ಮಾತನಾಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ, ಜಿಲ್ಲೆಗೆ 125 ಕೋಟಿ ರೂ. ಹಣ ಬಿಡುಗಡೆ ವಿಳಂಬ ಆಗಿತ್ತು. ಹಣ ಬಿಡುಗಡೆ ಮಾಡುವಂತೆಯೂ ಸಿಎಂರಲ್ಲಿ ಮನವಿ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹಣ ಬಿಡುಗಡೆ ವಿಳಂಬ ಆಗಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ:
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಜಿ.ಎಂ ಸಿದ್ದೇಶ್ವರ್, ಸಿಎಂ ದೆಹಲಿಗೆ ಹೋಗುವ ವಿಚಾರ ಗೊತ್ತಿಲ್ಲ. ಜಿಲ್ಲೆಯ 6 ಶಾಸಕರಿಗೆ ನೀವೇ ಚರ್ಚಿಸಿ ನೀವೇ ಒಬ್ಬರನ್ನು ಸಚಿವ ಸ್ಥಾನಕ್ಕೆ ಫೈನಲ್ ಮಾಡಿಕೊಳ್ಳಿ ಎಂದಿದ್ದೆ. ಆದರೆ ಆರೂ ಜನ ಸಚಿವರಾಗಬೇಕು ಅಂದರೆ ಏನು ಮಾಡೋದು? ಜಿಲ್ಲೆಯ 6 ಜನ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಟ್ಟರೆ ಸ್ವಾಗತಿಸುತ್ತೇನೆ ಎಂದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಮಾತನಾಡಿ, ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಿಎಂಗೆ ಬಿಟ್ಟದ್ದು. ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ, ಪಕ್ಷಕ್ಕೆ ಬಂದವರನ್ನು ಈಗಾಗಲೇ ಯಡಿಯೂರಪ್ಪ ಮಂತ್ರಿ ಮಾಡಿದ್ದಾರೆ. ಮುನಿರತ್ನ ಅವರನ್ನೂ ಮಂತ್ರಿ ಮಾಡೋದಾಗಿ ಹೇಳಿದ್ದಾರೆ. ಅವರು ಘೋಷಣೆ ಮಾಡಿದಂತೆ ಮಂತ್ರಿ ಮಾಡುತ್ತಾರೆ. ಆ ನಂಬಿಕೆ ನಮಗಿದೆ ಎಂದರು.
ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಸಂಪುಟ ಪುನರ್ರಚನೆ ಮಾಡಿದರೆ ಒಳ್ಳೆಯದು. ಆದರೆ ಈಗ ಅದು ಮುಖ್ಯವಲ್ಲ. ನಮಗೆ ಮೆಡಿಕಲ್ ಕಾಲೇಜು ಬಂದಿರುವುದು ಸಚಿವ ಸ್ಥಾನ ಸಿಕ್ಕಿದಷ್ಟೇ ಖುಷಿ ತಂದಿದೆ. ನಾನು ಕೂಡ ಮಂತ್ರಿ ಸ್ಥಾನ ಕೇಳಿದ್ದೇನೆ. ಹಾಗೆಂದು ನಾನು ಪದೇ-ಪದೆ ಹೋಗಿ ಸಿಎಂಗೆ ಮುಜುಗರವನ್ನುಂಟುಮಾಡಲ್ಲ. ನನ್ನ ಹಿರಿತನದ ಆಧಾರದ ಮೇಲೆ ನನಗೆ ಮಂತ್ರಿ ಸ್ಥಾನ ಕೊಡುವ ಭರವಸೆ ಇದೆ ಎಂದು ತಿಳಿಸಿದರು.
ಸಚಿವ ಸ್ಥಾನದ ಆಕಾಂಕ್ಷಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮಂತ್ರಿ ಆಗಬೇಕು ಎಂದು ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ಯಾರನ್ನು ಸಚಿವರನ್ನಾಗಿ ಮಾಡಬೇಕು ಅನ್ನೋದನ್ನು ಪಕ್ಷ ನಿರ್ಧರಿಸಲಿದೆ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದರು.