ಚಿತ್ರದುರ್ಗ: ಚಿನ್ನ ಹಾಗೂ ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿ ಅವರಿಂದ ಸುಮಾರು 22 ಲಕ್ಷ ಮೌಲ್ಯದ ಚಿನ್ನ ಹಾಗೂ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಅವರು ಮಾಧ್ಯಮಗೋಷ್ಠಿ ನಡೆಸಿದರು. ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸೆಪ್ಟೆಂಬರ್ 22 ತಾರೀಖಿನಂದು ಪರಮೇಶ್ವರಪ್ಪ ಎಂಬುವರ ತೋಟದ ಮನೆಯಲ್ಲಿ ಕಳುವಾಗಿದ್ದ 14 ಲಕ್ಷ ಮೌಲ್ಯದ ಬಂಗಾರ ಹಾಗೂ 70 ಸಾವಿರ ನಗದನ್ನು ಕದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಮಾಧ್ಯಮಗೋಷ್ಠಿ ಇನ್ನು ಪ್ರಕರಣದ ಆರೋಪಿ ನಾಗರಾಜಪ್ಪ ಅಲಿಯಾಸ್ ಕೊರಟಗೆರೆ ರಾಜ (45) ಎಂಬವನನ್ನು ಪೊಲೀಸರು ಬಂಧಿಸಿ 15 ಲಕ್ಷ ಬೆಲೆ ಬಾಳುವ 350 ಗ್ರಾಂ ತೂಕದ (ಪ್ರಸ್ತುತ ದರ) ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೊರಟಗೆರೆ ಗ್ರಾಮದ ಆರೋಪಿ ನಾಗರಾಜಪ್ಪ ಕದ್ದ ಬಂಗಾರವನ್ನು ಇಂಡಿಯನ್ ಹಾಗೂ ಮಣಪುರಂ ಗೋಲ್ಡ್ ಲೋನ್ ಕಂಪನಿಗಳಲ್ಲಿ ಅಡವಿಟ್ಟಿದ ಎಂಬ ಜಾಡು ಹಿಡಿದ ಪೊಲೀಸರು, ಬಂಗಾರವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಬೈಕ್ ಕಳ್ಳರನ್ನು ಪೊಲೀಸರು ಸೆರೆಹಿಡಿದಿದ್ದು, ಕಳ್ಳತನ ಮಾಡಿದ್ದ 5 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಸದುರ್ಗ ಠಾಣೆಯ ಸರಹದ್ದಿನಲ್ಲಿ ಹುಂಡಿ ಕಳ್ಳತನ ಹಾಗೂ ಬೈಕ್ ಕಳ್ಳತನದ ಪ್ರಕರಣ ದಾಖಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಇಬ್ಬರು ಆರೋಪಿಗಳಾದ ಕರುಣ್ ಅಲಿಯಾಸ್ ಕರ್ಣ (18), ಪ್ರೇಮ್ ಕುಮಾರ್ ಅಲಿಯಾಸ್ ಪ್ರೇಮ್ (19) ಎಂಬ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6.90 ಲಕ್ಷ ಬೆಲೆ ಬಾಳುವ 5 ಬೈಕ್ ಗಳನ್ನು ಹಾಗೂ 1690 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.