ಚಿತ್ರದುರ್ಗ :ಗೋವಾದಲ್ಲಿ ಮಗುವನ್ನು ಕೊಂದು ಕರ್ನಾಟಕಕ್ಕೆ ಸೂಟ್‌ಕೇಸ್‌ನಲ್ಲಿ ತಂದಿದ್ದ ಪ್ರಕರಣದ ಶವಪರೀಕ್ಷೆ ವರದಿ ಬಂದಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. 36 ಗಂಟೆಗಳಿಗೂ ಮೊದಲು ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಗೋವಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ 4 ವರ್ಷದ ಮಗುವನ್ನು ಸ್ವತಃ ತಾಯಿಯೇ ಕೊಂದ ಪ್ರಕರಣದ ಶವಪರೀಕ್ಷೆಯನ್ನು ಇಲ್ಲಿನ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಮಗುವಿನ ಸಾವಿನ ನಿಖರ ಸಮಯ ತಿಳಿದಿಲ್ಲವಾದರೂ 36 ಗಂಟೆಗಳ ಮೊದಲು ಕೊಲೆ ನಡೆದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
"ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಬಟ್ಟೆ ಅಥವಾ ದಿಂಬನ್ನು ಬಳಸಿರುವ ಸಾಧ್ಯತೆ ಇದೆ. ಕತ್ತು ಹಿಸುಕಿದ ಬಗ್ಗೆ ಮಗುವಿನ ದೇಹದ ಮೇಲೆ ಯಾವುದೇ ಕುರುಹುಗಳಿಲ್ಲ. ದಿಂಬು ಅಥವಾ ಇನ್ನಾವುದೇ ವಸ್ತುವನ್ನು ಬಳಸಲಾಗಿದೆ. ಮಗುವಿನಲ್ಲಿ ರಿಗರ್ ಮೋರ್ಟಿಸ್ ಕಂಡುಬಂದಿಲ್ಲ. ಸಾಮಾನ್ಯವಾಗಿ ರಿಗರ್ ಮೋರ್ಟಿಸ್ 36 ಗಂಟೆಗಳ ನಂತರ ಕಂಡುಬರುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ರಿಗರ್ ಮೋರ್ಟಿಸ್ ಇರಲಿಲ್ಲ. ಆದ್ದರಿಂದ, ಮಗುವು ಕೊಲೆಯಾಗಿ 36 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ದೇಹದ ಮೇಲೆ ಯಾವುದೇ ಕಲೆ, ರಕ್ತ ಸೋರಿಕೆಯಾಗಲಿ ಕಂಡು ಬಂದಿಲ್ಲ ಎಂದು ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕುಮಾರ್ ನಾಯ್ಕ್ ತಿಳಿಸಿದರು.
"ಮಗುವಿನ ಹತ್ಯೆ ಯಾವಾಗ ಸಂಭವಿಸಿದೆ ಎಂಬುದನ್ನ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮಗು ಉಸಿರು ನಿಲ್ಲಿಸಿ 36 ಗಂಟೆಗೂ ಹೆಚ್ಚು ಸಮಯವಾಗಿದೆ. ಮಗುವಿನ ಕೈಕಾಲುಗಳು ಸೆಟೆದಿವೆ" ಎಂದು ಅವರು ಮಾಹಿತಿ ನೀಡಿದರು.
ಪ್ರಕರಣವೇನು?:ಆರೋಪಿಯಾಗಿರುವ ಸುಚನಾ ಸೇಠ್ ದಿ ಮೈಂಡ್‌ಫುಲ್ ಅಲ್ ಲ್ಯಾಬ್ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿದ್ದಾರೆ. ಅವರು ಸೋಮವಾರ ರಾತ್ರಿ ಗೋವಾದಿಂದ ಚಿತ್ರದುರ್ಗದ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ಬಂಧಿಸಲಾಗಿದೆ. ಕಾರಿನಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಗೋವಾ ಪೊಲೀಸರ ನಿರ್ದೇಶನದ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ.
ಸುಚನಾ ಸೇಠ್ ಕಳೆದ ಶನಿವಾರ ತಮ್ಮ ನಾಲ್ಕು ವರ್ಷದ ಮಗನನ್ನು ಗೋವಾದ ಹೋಟೆಲ್ಗೆ ಕರೆದುಕೊಂಡು ಹೋಗಿದ್ದರು. ಸೋಮವಾರ ಬೆಳಗ್ಗೆ ಅಲ್ಲಿನ ರೂಂ ಖಾಲಿ ಮಾಡಿ ಟ್ಯಾಕ್ಸಿಯಲ್ಲಿ ವಾಪಸ್ ಬಂದಿದ್ದರು. ಕೊಠಡಿಯನ್ನು ಸ್ವಚ್ಛಗೊಳಿಸಲು ಹೋದ ಸಿಬ್ಬಂದಿಗೆ ರಕ್ತದ ಕಲೆಗಳು ಕಂಡುಬಂದಾಗ ಅವರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಹೋಟೆಲ್ ಮ್ಯಾನೇಜ್ಮೆಂಟ್ಗೆ ಮಾಹಿತಿ ನೀಡಿದ್ದು, ಹೋಟೆಲ್ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಸೂಟ್‌ಕೇಸ್‌ನಲ್ಲಿ ಮಗುವಿನ ಶವದೊಂದಿಗೆ ಕಾರ್ನಲ್ಲಿ ತೆರಳುತ್ತಿದ್ದ ತಾಯಿ ಬಂಧನ