ಚಿತ್ರದುರ್ಗ:ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಕಡೆ ಕಂಪ್ಯೂಟರ್ಗಳ ಕಳವು ಮಾಡುತ್ತಿದ್ದ ಖತರ್ನಾಕ್ ಖದೀಮರ ಗ್ಯಾಂಗ್ ನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪಟ್ಟಣದ ಕಟುಕರ ಬೀದಿ ನಿವಾಸಿ ಅಬ್ದುಲ್ ರೆಹಮಾನ್ (33), ಭಾಗ್ಯಜ್ಯೋತಿ ನಗರದ ನಿವಾಸಿಗಳಾದ ವಾಸಿಂ ಅಕ್ರಂ (23), ಮುಬಾರಕ್ (34), ಅಲ್ಲಾಭಕ್ಷ (29) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು. ಕಳೆದ ವರ್ಷದ ಸೆಪ್ಟಂಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹಲವು ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಸರಣಿ ಕಳ್ಳತನವನ್ನು ಈ ತಂಡವು ನಡೆಸಿತ್ತು. ಪಟ್ಟಣದ ತೋಟಗಾರಿಕೆ ಇಲಾಖೆ, ಬಿಇಒ ಕಚೇರಿ ಮತ್ತು ಪಶುಸಂಗೋಪನಾ ಇಲಾಖೆಯಲ್ಲಿನ ಕಂಪ್ಯೂಟರ್ ಗಳನ್ನು ಈ ಕಳ್ಳರು ಕದ್ದೊಯ್ದಿದ್ದರು.
ಸರ್ಕಾರಿ ಇಲಾಖೆಗಳಲ್ಲಿ ಸಿಸಿಟಿವಿ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡ ಕಳ್ಳರ ತಂಡ ಹಗಲು ಹೊತ್ತಲ್ಲಿ ಇಲಾಖೆಗಳ ಕಡೆ ಗಸ್ತು ನಡೆಸಿ ರಾತ್ರಿಯಾಗುತ್ತಿದ್ದಂತೆ ಸರ್ಕಾರಿ ಇಲಾಖೆಗಳ ಬೀಗ ಒಡೆದು ಕಂಪ್ಯೂಟರ್ ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.