ಚಿತ್ರದುರ್ಗ:ಬೈಕ್‍ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಹಾಗೂ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಭೀಕರ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಚನ್ನಗಿರಿ ತಾಲೂಕಿನ ಬಿ ದುರ್ಗ ಗ್ರಾಮದವರಾದ ನಾಗರಾಜ್ (43), ಶೈಲಜಾ (40) ದಂಪತಿ ಹಾಗೂ ಮಕ್ಕಳಾದ ವೀರೇಶ್ (15) ಹಾಗೂ ಸಂತೋಷ್ (13) ಎಂಬುವರು ಅಸುನೀಗಿದ್ದಾರೆ.
ನಾಗರಾಜ್ ಕುಟುಂಬಸ್ಥರು ಸಮೀಪದ ಹೆಬ್ಬಳಗೆರೆಯಲ್ಲಿನ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮ ಬಿ ದುರ್ಗಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಚಿತ್ರದುರ್ಗದಿಂದ ಬರುತ್ತಿದ್ದ ಖಾಸಗಿ ಬಸ್‍ವೊಂದು ಓವರ್ಟೇಕ್ ಮಾಡಿ, ಮುನ್ನುಗ್ಗುವಾಗ ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.