ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮಗು ಸೇರಿ ಐವರು ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬಸ್ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಜೊತೆಗೆ ಕೆಲವರು ಗಾಯಗೊಂಡಿದ್ದಾರೆ.
ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ (45) , ರಾಯಚೂರಿನ ಮಸ್ಕಿ ಮೂಲದ ರಮೇಶ್ (40), ರಾಯಚೂರು ಜಿಲ್ಲೆಯ ಆಲಾಪುರ ಮೂಲದ ರವಿ (23), ರಾಯಚೂರು ಮೂಲದ ಮಾಬಮ್ಮ (35) ಹಾಗೂ ಮಾನವಿ ಮೂಲದ ಮಗು ನರಸಪ್ಪ (5) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ, ಮಾಬಮ್ಮ (35) ಚಿಕಿತ್ಸೆಗೆ ಸ್ಪಂದಿಸದೇ ಜಿಲ್ಲಾಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಬಸ್ನಲ್ಲಿದ್ದ 6 ಜನರಿಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬಸ್ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಎಡಗಡೆಯ ಸೀಟಿನಲ್ಲಿ ಮುಂದೆ ಕುಳಿತಿರುವ ನಾಲ್ವರು ಮೃತಪಟ್ಟಿದ್ದಾರೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಐಮಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಮೃತರಲ್ಲಿ ರಾಯಚೂರು ಮೂಲದವರು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತ ರವಿ (23) ಎಂಬುವರು ಮಸ್ಕಿಗೆ ಹೆಣ್ಣು ನೋಡಲು ಹೋಗಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದರು. ಹಾಗೆಯೇ ಕಡೋಣಿ ಇಂದ ಬೆಂಗಳೂರಿಗೆ ಗಾರೆ ಕೆಲಸಕ್ಕೆ ತೆರಳುತ್ತಿದ್ದ ಶ್ರೀದೇವಿ ಎಂಬುವರ ಮಗು ನರಸಪ್ಪ (5) ಕೂಡ ಅಪಘಾತದಲ್ಲಿ ಸಾವನ್ನಪ್ಪಿದೆ. ಗಾಯಾಳುಗಳನ್ನು ಚಳ್ಳಕೆರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.