ಚಿತ್ರದುರ್ಗ: ಬರೀ ಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಮಹಿಳೆವೋರ್ವಳನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಅಶೋಕ್ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ಶನಿವಾರ ನಡೆದಿದ್ದ ಈ ಅಮಾನವೀಯ ಘಟನೆ ಬಗ್ಗೆ 'ಈಟಿವಿ ಭಾರತ'ನಲ್ಲಿ ಘಟನೆ ವರದಿ ಪ್ರಕಟಿಸಲಾಗಿತ್ತು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಖುದ್ದು ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಇದು ಈಟಿವಿ ಭಾರತ ವರದಿಯ ಫಲಶೃತಿಯಾಗಿದೆ.
ಗುತ್ತಿಗೆದಾರನ ವಿರುದ್ಧ ಎಫ್ಐಆರ್ ಹಿನ್ನೆಲೆ:
ಗುತ್ತಿಗೆದಾರ ಅಶೋಕ್ ಈ ಮಹಿಳೆಗೆ ಯಾವುದೇ ರೀತಿಯ ರಕ್ಷಣಾ ಕವಚ ನೀಡದೆ ಮ್ಯಾನ್ಹೋಲ್ಗೆ ಇಳಿಸಿದ್ದರು. ನಗರದ ಜೈನ್ ದೇವಾಲಯ ಮುಂಭಾಗದ ರಸ್ತೆಯಲ್ಲಿ, ಮಹಿಳೆಯನ್ನ ಮ್ಯಾನ್ ಹೋಲ್ಗೆ ಇಳಿಸಿ ಸ್ವಚ್ಛಗೊಳಿಸುವಂತೆ ಕಾಂಟ್ರಾಕ್ಟರ್ ಹೇಳಿರುವುದನ್ನು ಸಾರ್ವಜನಿಕರು ಖಂಡಿಸಿದ್ದರು.
ರಕ್ಷಣಾ ಕವಚವಿಲ್ಲದೆ ಮಹಿಳೆಯನ್ನು ಮ್ಯಾನ್ಹೋಲ್ಗೆ ಇಳಿಸಿದ್ರು: ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ
ಈ ಅಮಾನವೀಯ ಘಟನೆ ಕುರಿತು ವರದಿ ಪ್ರಕಟಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದಾರೆ. ವರದಿಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸಿದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.