ಚಿತ್ರದುರ್ಗ: ಮಹಾಮಾರಿ ಕೊರೊನಾ ರೋಗವನ್ನು ನಿಯಂತ್ರಣಗೊಳಿಸಲು ಎರಡನೇ ಬಾರಿಗೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಬದಿ, ಹೋಟೆಲ್, ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಚರ್ಮಗಾರಿಕೆಯಲ್ಲಿ ತೊಡಗಿಸಿಕೊಂಡ ಸುಮಾರು 50,000 ಚರ್ಮ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರವಾಗಿ ಕುಟುಂಬಗಳಿಗೆ ತಲಾ 2 ಸಾವಿರ ರೂ. ಆರ್ಥಿಕ ನೆರವು ನೀಡಲು 10 ಕೋಟಿ ರೂ. ಬಿಡುಗಡೆ ಮಾಡಿದ್ದು, ಪರಿಹಾರಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವಂತೆ ತಾವು ಸಲ್ಲಿಸಿದ ಪ್ರಸ್ತಾವನೆಗೆ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ, ಅನುಮೋದನೆ ನೀಡಿ ನೆರವಾಗಲು ಅನುದಾನವನ್ನೂ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಅಭಿನಂದನೆ. ಈ ಪರಿಹಾರ ಹಣವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿ, ಡಿಬಿಟಿ ಮುಖಾಂತರ ಪಾರದರ್ಶಕವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು. ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಅಗತ್ಯ ಕ್ರಮ ವಹಿಸಲಾಗುತ್ತಿದ್ದು, ಫಲಾನುಭವಿಗಳು ದಿನಾಂಕ 3-6-2021ರಿಂದ 15/6/2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಫಲಾನುಭವಿಗಳು ಪರಿಹಾರಧನವನ್ನು ಪಡೆಯಲು ಅರ್ಜಿಗಳನ್ನು ತಮ್ಮ ಮೊಬೈಲ್ನಿಂದ/ ಬೆಂಗಳೂರು ಒನ್/ ಕರ್ನಾಟಕ ಒನ್ /ಗ್ರಾಮ ಒನ್/ಸಿಟಿಜನ್ ಸರ್ವೀಸ್ ಸೆಂಟರ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ. ಲಿಡ್ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕರು ಸಂಪೂರ್ಣ ಮಾಹಿತಿಯೊಂದಿಗೆ ಹೆಲ್ಪ್ ಡೆಸ್ಕ್ನಂತೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಫಲಾನುಭವಿಗಳಿಗೆ ಯೋಜನೆಯ ವಿವರ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ವಿಳಂಬ ಮಾಡದೇ ಈ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಪರಿಹಾರಧನವನ್ನು ಅವರ ಖಾತೆಗಳಿಗೆ ಜಮೆ ಮಾಡುವಂತೆ ಲಿಡ್ಕರ್ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.