ಚಿತ್ರದುರ್ಗ : ಎಫ್ಡಿಎ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಗುರುಲಿಂಗಪ್ಪ (52) ಆತ್ಮಹತ್ಯೆ ಮಾಡಿಕೊಂಡ ಎಫ್ಡಿಎ ಆಗಿದ್ದಾರೆ. ಗುರುಲಿಂಗಪ್ಪ ಅವರು ಚಳ್ಳಕೆರೆಯ ವಾಲ್ಮೀಕಿ ಬಡಾವಣೆಯ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಡೆತ್ ನೋಟ್ ಬರೆದಿರುವುದನ್ನು ಚಳ್ಳಕೆರೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ
ಯುವ ವಿಜ್ಞಾನಿ ಆತ್ಮಹತ್ಯೆ( ಪುತ್ತೂರು) : ಡಿಸೆಂಬರ್ 14, ಗುರುವಾರ ದಂದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಯುವ ವಿಜ್ಞಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಲ್ಲರ್ಪೆ ನಿವಾಸಿ ಶ್ರೀಧರ್ ಆಚಾರ್ಯ ಎಂಬವರ ಪುತ್ರ ಭರತ್ ಕಲ್ಲರ್ಪೆ (24) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ಈತ ಹೈದರಾಬಾದ್ನ ಖಾಸಗಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅವರು ಉದ್ಯೋಗಕ್ಕೆ ಸೇರಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಊರಿಗೆ ಆಗಮಿಸಿದ್ದರು. ತಾವು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ, ರಾಜೀನಾಮೆ ಸ್ವೀಕರಿಸಿರಲಿಲ್ಲ ಎಂದು ಹೇಳಲಾಗಿದೆ. ಬುಧವಾರ ರಾತ್ರಿ ಸಂಸ್ಥೆಯ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಬಳಿಕ ತಡರಾತ್ರಿ ಈ ಕೃತ್ಯ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಲಬುರಗಿಯಲ್ಲಿ ಪ್ರೇಮಿಗಳು ಆತ್ಮಹತ್ಯೆ( ಕಲಬುರಗಿ) :ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗೂ ಬಾಲಕಿ ಮನೆಯಿಂದ ಓಡಿ ಹೋಗಿ, ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾ ಬಳಿ ಡಿ.12 ಮಂಗಳವಾರ ರಾತ್ರಿ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡವರನ್ನು ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿಯ ಬಾಲಕಿ ಹಾಗೂ ಇದೇ ತಾಲೂಕಿನ ಕೊಲ್ಲೂರ್ ಗ್ರಾಮದ ಆಕಾಶ್ (18) ಎಂದು ಗುರುತಿಸಲಾಗಿತ್ತು. ಯಾದಗಿರಿ ನಗರದಲ್ಲಿ ಐಟಿಐ ಮಾಡುತ್ತಿದ್ದ ಆಕಾಶ್, ಎಂಟನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಮಂಗಳವಾರ ರಾತ್ರಿ ಮನೆಯಿಂದ ಓಡಿಹೋದ ಆಕಾಶ್ ಹಾಗೂ ಬಾಲಕಿ ಚೌಕಿ ತಾಂಡಾ ಬಳಿಯ ಯಲ್ಲಮ್ಮದೇವಿ ದೇವಸ್ಥಾನ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.