ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಂದ್ಗೆ ಕರೆ ಮಾಡಲಾಗಿದ್ದು, ಸ್ಥಳೀಯರೆಲ್ಲರೂ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ವಾಣಿ ವಿಲಾಸ ಸಾಗರ ಹೋರಾಟ ಸಮಿತಿಯಿಂದ ಕರೆದಿರುವ ಹಿರಿಯೂರು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ರೈತಪರ ಮತ್ತು ಕನ್ನಡಪರ ಸಂಘಟನೆಗಳಿಂದ ಬಂದ್ಗೆ ಬೆಂಬಲ ವ್ಯಕ್ತವಾಗಿದ್ದು, ಖಾಸಗಿ ಬಸ್, ಆಟೋ ಟ್ಯಾಕ್ಸಿ ಸಂಚಾರ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ವಿವಿ ಸಾಗರ ಉಳಿಸುವಂತೆ ರೈತರ ಪ್ರತಿಭಟನೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಹಿರಿಯೂರು ಮತ್ತು ವಾಣಿವಿಲಾಸಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು ,ವಿವಿ ಸಾಗರ ಉಳಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ನೀರಿನ ಮಟ್ಟ ಕುಸಿದಿದ್ದರೂ ಚಿತ್ರದುರ್ಗ, ಚಳ್ಳಕೆರೆ ಸೇರಿದಂತೆ ವಿವಿಧೆಡೆಗಳಿಗೆ ಜಿಲ್ಲಾಡಳಿತ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಈ ಹಿನ್ನೆಲೆ ವಿವಿ ಸಾಗರಕ್ಕೆ ಅಣೆಕಟ್ಟೆ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಸಾಗರ ಉಳಿಸುವಂತೆ ಜಿಲ್ಲಾಡಳಿತಕ್ಕೆ ರೈತರು ಪ್ರತಿಭಟನೆಯ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.