ಚಿತ್ರದುರ್ಗ: ಸರ್ಕಾರ ಜಿಲ್ಲೆಗೆ ಅಂಟಿರುವ ಬರವನ್ನು ಸಂಪೂರ್ಣವಾಗಿ ದೂರ ಮಾಡಬೇಕೆಂಬ ಸಂಕಲ್ಪದೊಂದಿಗೆ ಕೋಟೆನಾಡಿಗೆ ಭದ್ರ ಮೇಲ್ದಂಡೆ ಯೋಜನೆ ಜಾರಿ ಮಾಡಿದೆ. ಆದರೆ ಭದ್ರ ಜಲಾಶಯದ ಮೂಲಕ ಕೆರೆಗಳಿಗೆ ಜೀವ ಜಲ ಹರಿಯುವ ಮುನ್ನವೆ ಎರಡು ಜಿಲ್ಲೆಗಳ ರೈತರ ನಡುವೆ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಚಿತ್ರದುರ್ಗ ಹಾಗೂ ಜಗಳೂರು ತಾಲೂಕುಗಳಿಗೆ ಭದ್ರಾ ನಾಲೆಯಿಂದ ಒಟ್ಟು 2.4 ಟಿಎಂಸಿ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಆದರೆ ಚಿತ್ರದುರ್ಗ ತಾಲೂಕಿನ ಕಾತ್ರಾಳ್, ಮುದ್ದಾಪುರ, ಯಳಗೋಡು, ಸುಲ್ತಾನಿಪುರ ಗ್ರಾಮಗಳ ಮೂಲಕ ಕಾಲುವೆ ಮಾರ್ಗವಾಗಿ ನೀರು ಹರಿಯುವುದರಿಂದ ನೀರಿನ ಅಭಾವ ಎದುರಾಗುತ್ತೆ ಎಂಬ ಉದ್ದೇಶದಿಂದ ಜಗಳೂರು ರೈತರು ಬೆಳಗಟ್ಟ ಮಾರ್ಗದಿಂದ ಕೆರೆಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರಂತೆ.
ಜಗಳೂರು ರೈತರು ಅಪ್ಪರ್ ಭದ್ರಾ ಕಾಲುವೆ ಮಾರ್ಗ ಬದಲಾವಣೆಗೆ ಪಟ್ಟು ಹಿಡಿದರೆ ಇನ್ನೂ ಚಿತ್ರದುರ್ಗ ತಾಲೂಕಿನ ರೈತರು ಪ್ರತಿಭಟನೆ ಮಾಡಿ ರಾಷ್ಟ್ರೀಯ ಹೆದ್ದಾರಿ 04 ಬಂದ್ ಮಾಡಿ ಮಾರ್ಗ ಬದಲಾವಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಜಗಳೂರು ತಾಲೂಕಿನ ಸಂಗೇನಹಳ್ಳಿ, ನಿಬಗೂರು, ಜಮ್ಮಾಪುರ, ಭರಮಸಮುದ್ರ, ಬಿದರಕೆರೆ, ಜಗಳೂರು ಕೆರೆಗಳನ್ನು ತುಂಬಿಸಲಿ ಅದರ ಬದಲು ಮಾರ್ಗವನ್ನು ಬದಲಾವಣೆ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.