ಚಿತ್ರದುರ್ಗ:ಕೋಟೆನಾಡಿನ ಏಕೈಕ ಜಲಾಶಯ ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದ ನೀರನ್ನು ಅಧಿಕಾರಿಗಳು ಏಕಾಏಕಿ ನಿಲ್ಲಿಸಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ನೀರು ಹರಿಸುವ ವಿಚಾರವಾಗಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿತ್ತು. 17 ದಿನಗಳ ಹಿಂದಷ್ಟೇ ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದ ನೀರನ್ನ ಅಧಿಕಾರಿಗಳು ಏಕಾಏಕಿ ನಿಲ್ಲಿಸಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಚ್ ತಿಂಗಳ ಅಂತ್ಯದವರೆಗೂ 10 ಟಿಎಂಸಿ ನೀರನ್ನು ಹರಿಸಿ, ಚಿತ್ರದುರ್ಗ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ರಾಜ್ಯಸರ್ಕಾರ ಸೂಚಿಸಿತ್ತು. ಆದ್ರೀಗ ಏಕಾಏಕಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ತಮ್ಮ ಪಾಲಿನ ನೀರು ಬಿಡುವಂತೆ ಯಾವೊಬ್ಬ ಜನಪ್ರತಿನಿಧಿಗಳು ರೈತರ ಪರ ಧ್ವನಿ ಎತ್ತುತ್ತಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.